ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಓಲೈಕೆಗೆ ರಾಜಕೀಯ ನಾಯಕರು ಮುಂದಾಗಿದ್ದಾರೆ. ರೇಷನ್ ಕಿಟ್, ಕುಕ್ಕರ್, ಸೀರೆ, ಬೆಳ್ಳಿ ವಿಗ್ರಹ ಸೇರಿದಂತೆ ಗಿಫ್ಟ್ ಗಳ ಆಮೀಷವೊಡ್ಡಿ ಮತದಾರರನ್ನು ಸೆಳೆಯುತ್ತಿದ್ದಾರೆ.
ಹೌದು, ರಾಷ್ಟ್ರೀಯ ಪಕ್ಷಗಳ ನಾಯಕರಂತೆಯೇ ಪಕ್ಷೇತರ ಅಭ್ಯರ್ಥಿಗಳು ಸಹ ಇದೀಗ ಮತದಾರರನ್ನು ಸೆಳೆಯುವ ತಂತ್ರ ರೂಪಿಸಿದ್ದಾರೆ. ಅದರಂತೆಯೇ, ಮತದಾರರಿಗೆ ರೇಷನ್ ಕಿಟ್ ವಿತರಿಸಲು ಸಿದ್ಧತೆ ನಡೆಸಿದ್ದ ಪಕ್ಷೇತರ ಅಭ್ಯರ್ಥಿಗೆ ಪೊಲೀಸರ್ ಶಾಕ್ ನಿಡಿದ್ದಾರೆ.
ಗೌರಿಬಿದನೂರು ಪಕ್ಷೇತರ ಅಭ್ಯರ್ಥಿ ಕೆಂಪರಾಜುಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಮತದಾರರಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ರೇಷನ್ ಕಿಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ರೇಷನ್ ಕಿಟ್ ನಲ್ಲಿದ್ದ ವಸ್ತುಗಳಿವು
ಗೋದಿ, ರವೆ, ಮೈದ ಹಿಟ್ಟು, ಬೆಲ್ಲ, ತುಪ್ಪ ಸೇರಿದಂತೆ ವಿವಿಧ ಪದಾರ್ಥಗಳನ್ನು ವಿತರಿಸಲು ತಯಾರಿ ಮಾಡಿಕೊಳ್ಳಲಾಗಿತ್ತು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಗೌರಿಬಿದನೂರು ನಿವಾಸಿ ಕೆಂಪರಾಜು ಭಾವಚಿತ್ರ ವಿರುವ ರೇಷನ್ ಕಿಟ್ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
415 ಚೀಲ ಗೋಧಿ ಹಿಟ್ಟು, 1,350 ಮೈದ ಹಿಟ್ಟಿನ ಚೀಲ, 1,100 ರಟ್ಟಿನ ಬಾಕ್ಸ್ ಬೆಲ್ಲ, 700 ರವೆ ಚೀಲ, 32 ಬಾಕ್ಸ್ ಹಪ್ಪಳ, 1,950 ಉಪ್ಪಿನ ಚೀಲ ಸಂಗ್ರಹಿಸಿದ್ದರು. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.