ಬೆಂಗಳೂರು : ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಭಾರತದ ವಿರುದ್ಧ ಕೆಲಸ ಮಾಡುತ್ತಿರುವ ಟೂಲ್ ಕಿಟ್‌ನ ಶಾಶ್ವತ ಭಾಗವಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಟೀಕಿಸಿದ್ದಾರೆ.
ಇತ್ತೀಚೆಗೆ ಪ್ರಜಾಪ್ರಭುತ್ವದ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರೆಯೆ ನೀಡಿದ್ದು, ನಮ್ಮ ದೇಶದ ವ್ಯವಹಾರದಲ್ಲಿ ಅನ್ಯ ದೇಶಗಳು ಮಧ್ಯ ಪ್ರವೇಶಿಸಬೇಕು ಎಂದು ರಾಹುಲ್ ಗಾಂಧಿ ನೀಡಿದ ಹೇಳಿಕೆ ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.
ದೇಶವು ಪದೇ ಪದೆ ತಿರಸ್ಕರಿಸಿದ ಬಳಿಕ ರಾಹುಲ್ ಗಾಂಧಿ, ದೇಶ ವಿರೋಧಿ ಟೂಲ್ ಕಿಟ್ ನ ಶಾಶ್ವತ ಭಾಗವಾಗಿದ್ದಾರೆ. ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಜಿ–20 ಸಭೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ರಾಹುಲ್ ಗಾಂಧಿ, ವಿದೇಶಿ ನೆಲದಿಂದ ಭಾರತ, ಸಂಸತ್ ಮತ್ತು ದೇಶದ ಜನರನ್ನು ಅವಮಾನಿಸುವ ಮೂಲಕ ದೇಶ ವಿರೋಧಿಗಳಿಗೆ ಬಲ ನೀಡಿದ್ದಾರೆ ಎಂದು ನಡ್ಡಾ ಟೀಕಿಸಿದ್ದಾರೆ.
ಇದಕ್ಕಿಂತ ನಾಚಿಕೆಗೇಡು ಇನ್ನೇನಿದೆ?
ಭಾರತದಲ್ಲಿ ಪ್ರಜಾಪ್ರಭುತ್ವದ ಅಂತ್ಯವಾಗಿದೆ. ಯೂರೋಪ್ ಮತ್ತು ಅಮೆರಿಕ ದೇಶಗಳು ಮಧ್ಯಪ್ರವೇಶಿಸಬೇಕೆಂದು ವಿದೇಶಿ ನೆಲದಲ್ಲಿ ನಿಂತು ಹೇಳಿಕೆ ನೀಡಿದ್ದಾರೆ. ಇದಕ್ಕಿಂತ ನಾಚಿಕೆಗೇಡು ಇನ್ನೇನಿದೆ? ಎಂದು ನಡ್ಡಾ ಪ್ರಶ್ನಿಸಿದ್ದಾರೆ.
ದೇಶ ವಿರೋಧಿಗಳನ್ನು ರಾಹುಲ್ ಬಲಪಡಿಸುತ್ತಿದ್ದಾರೆ ಎಂದು ಟೀಕಿಸಿದ ನಡ್ಡಾ, ಚುನಾಯಿತ ಬಹುಮತದ ಸರ್ಕಾರ ಹಾಗೂ 130 ಕೋಟಿ ಜನಸಂಖ್ಯೆಯನ್ನು ಅವಮಾನಿಸಿದ್ದಾರೆ ಎಂದು ದೂರಿದ್ದಾರೆ. ಪಾಕಿಸ್ತಾನ ಮತ್ತು ರಾಹುಲ್ ಗಾಂಧಿ ಒಂದೇ ಧಾಟಿಯಲ್ಲಿ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.