ಬೆಂಗಳೂರು : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಲಾಭಿ ಮುಂದುವರಿದಿದ್ದು, ಟಿಕೆಟ್ ಆಕಾಂಕ್ಷಿಗಳ ದಂಡೇ ದೆಹಲಿಯತ್ತ ಮುಖ ಮಾಡಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ಅವರು, ಎಲ್ಲರನ್ನೂ ಎಂಎಲ್ಎ (ಶಾಸಕ) ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಕಾಂಗ್ರೆಸ್ ಟಿಕೆಟ್ಗಾಗಿ 1,250 ಜನ ಅರ್ಜಿ ಹಾಕಿದ್ದಾರೆ. ಎಲ್ಲರಿಗೂ ಎಂಎಲ್ಎ ಆಗಬೇಕೆನ್ನುವ ಆಸೆ ಇದೆ. ಪ್ರತಿಯೊಬ್ಬರು ಸೇರಿನೇ ಪಕ್ಷ ಆಗಿರೋದು. ಈಗಾಗಲೇ ಐದು ಸಭೆ ಮಾಡಿ ಚರ್ಚೆ ಮಾಡಿದ್ದೇವೆ ಎಂಟು ಸರ್ವೆ ಆಗಿದೆ. ಸರ್ವೆ ಪ್ರಕಾರ ಒಂದು ನಿರ್ಧಾರಕ್ಕೆ ಬರ್ತೀವಿ ಎಂದು ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ಸಿನ ಸುಳ್ಳಿನ ಫ್ಯಾಕ್ಟರಿಯಿಂದ ಬಂದ ಫೇಕ್ ನ್ಯೂಸ್ : ಸಿ.ಟಿ. ರವಿ
ನಾನು ಪೂಜಾರಿ ಅಷ್ಟೇ..!
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಎಲ್ಲರ ನರ-ನಾಡಿ ಗೊತ್ತಿದೆ. ನಾನು ಪೂಜಾರಿ ಅಷ್ಟೇ. ಜನ ಹೇಳಿದ್ದನ್ನು ದೇವರಿಗೆ ತಲುಪುಸೋದು ನನ್ನ ಕೆಲಸ. ಎಲ್ಲರನ್ನೂ ಸಮಾಧಾನ ಪಡಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಪಕ್ಷಕ್ಕಾಗಿ ತ್ಯಾಗ ಮಾಡಬೇಕಾಗುತ್ತದೆ ಎಂದು ಡಿಕೆಶಿ ತಿಳಿಸಿದ್ದಾರೆ.
ಟಿಕೆಟ್ ಸಿಗದವರನ್ನು ಎಂಎಲ್ಸಿ ಮಾಡುತ್ತೇವೆ. ಪಕ್ಷ ಅಧಿಕಾರಕ್ಕೆ ಬಂದರೆ ಹೆಚ್ಚಿನವರಿಗೆ ಅವಕಾಶ ನೀಡಲು ಪ್ರಯತ್ನಿಸುತ್ತೇವೆ ಎಂದು ಇದೇ ವೇಳೆ ಡಿ.ಕೆ ಶಿವಕುಮಾರ ಹೇಳಿದ್ದಾರೆ. ಇತ್ತ, ಡಿಕೆಶಿ ಹೇಳಿಕೆ ಹಲವು ಟಿಕೆಟ್ ಆಕಾಂಕ್ಷಿಗಳಿಗೆ ಎಚ್ಚರಿಕೆಯ ಗಂಟೆ ರವಾನಿಸಿದೆ ಎಂದರೆ ತಪ್ಪಾಗಲಾರದು.