ಬೆಂಗಳೂರು : ಲೋಕಾಯುಕ್ತ ದಾಳಿ ಹಾಗೂ ಲಂಚ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಇಂದು ವಿಚಾರಣೆ ನಡೆಸಿದೆ.
ಈ ವೇಳೆ, ಮಾಡಾಳ್ ಪರ ವಕೀಲರು ಹಾಗೂ ಲೋಕಾಯಕ್ತ ವಕೀಲರು ಭರ್ಜರಿಯಾಗಿಯೇ ವಾದ ಮಂಡನೆ ಮಾಡಿದರು. ಉಭಯ ವಕೀಲರ ವಾದ ಆಲಿಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೆ. ನಟರಾಜನ್, ಆದೇಶವನ್ನು ಕಾಯ್ದಿರಿಸಿದ್ದಾರೆ.
ಜಾಮೀನು ಅರ್ಜಿ ವಜಾಗೆ ಮನವಿ
ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಆರಂಭಿಸಿದ ಕೂಡಲೇ ಅದಕ್ಕೆ ಲೋಕಾಯುಕ್ತ ಪೊಲೀಸರು ಆಕ್ಷೇಪಣೆ ಸಲ್ಲಿಸಿದರು. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ : ಡಿಸಿಎಂ ತೇಜಸ್ವಿ ಯಾದವ್ ಬಂಧನವಿಲ್ಲ : ಸಿಬಿಐ
ಈ ಮಧ್ಯೆ, ಮಾಡಾಳ್ ಪರ ವಕೀಲರು ವಾದಮಂಡನೆಗೆ ಕಾಲಾವಕಾಶ ಕೋರಿದರು. ಆದರೆ, ಅವರ ಮನವಿಯನ್ನು ಹೈಕೋರ್ಟ್ ನಿರಾಕರಿಸಿ, ಕೂಡಲೇ ವಾದಮಂಡನೆ ಆರಂಭಿಸುವಂತೆ ಸೂಚಿಸಿತು.
ಮಾಡಾಳ್ ಅವರು ಪ್ರತಿದಿನವೂ ಲೋಕಾಯುಕ್ತ ಪೊಲೀಸರ ತನಿಖೆಗೆ ಹಾಜರಾಗಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ತನಿಖೆಯೇ ಮುಕ್ತಾಯದ ಹಂತದಲ್ಲಿರುವಾಗ ಬಂಧನದ ಅಗತ್ಯವಿಲ್ಲ. ಹೀಗಾಗಿ, ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮಾಡಾಳ್ ಪರ ವಕೀಲರು ವಾದ ಮಂಡಿಸಿದರು.