Wednesday, January 22, 2025

ಸಚಿವ ಅಶೋಕ್ ಭವಿಷ್ಯ, ಸಂಖ್ಯಾಶಾಸ್ತ್ರ ಹೇಳ್ತಾರೆ : ಎಚ್ ಡಿಕೆ ಲೇವಡಿ

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ 20 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುತ್ತದೆ ಎಂಬ ಕಂದಾಯ ಸಚಿವ ಆರ್.ಅಶೋಕ್‌ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ಅಶೋಕ್‌ ಅವರು ಭವಿಷ್ಯವನ್ನು, ಸಂಖ್ಯಾಶಾಸ್ತ್ರವನ್ನು ಹೇಳುತ್ತಾರೆ ಎಂದು ನನಗೆ ಗೊತ್ತಾಗಿದ್ದು ಈಗಲೇ. ಅವರಲ್ಲೂ ಒಬ್ಬರು ‘ಕಾಲಜ್ಞಾನಿ’, ‘ಸಂಖ್ಯಾಜ್ಞಾನಿ’ ಇದ್ದಾರೆನ್ನುವ ಸೋಜಿಗ ನನಗೆ ಬೆಕ್ಕಸ ಬೆರಗುಂಟು ಮಾಡಿದೆ ಎಂದು ಕುಟುಕಿದ್ದಾರೆ.

ಅಶೋಕ್ ಗಿಣಿ ಭವಿಷ್ಯ ಹೇಳಿದ್ದಾರೆ

ಸಾಮ್ರಾಟ್ ಅಶೋಕೂ, ನಿಮ್ಮ ಪಕ್ಷದಲ್ಲಿರುವ ಅರುಣರಾಗ, ವಿಜಯನಾದ ಕಥನಗಳ ಕಥೆ ಏನು? ಚುನಾವಣೆ ನಂತರ ತಮ್ಮ ದುಡಿಮೆಗೆ ದೋಖಾ ಇಲ್ಲ ಎನ್ನುವ ಆತ್ಮವಿಶ್ವಾಸ ಅಶೋಕ್ ಅವರಲ್ಲಿದೆ, ಸಂತೋಷ. ನಮ್ಮ ಜೆಡಿಎಸ್‌ ಪಕ್ಷಕ್ಕೆ 20 ಸ್ಥಾನಗಳು ಬರುತ್ತವೆ ಎಂದು ಚಿಕ್ಕಬಳ್ಳಾಪುರದಲ್ಲಿ ಗಿಣಿಭವಿಷ್ಯ ಹೇಳಿರುವ ಅವರು, ತಮ್ಮ ಬಿಜೆಪಿಗೆ ಅದೆಷ್ಟು ಸೀಟು ಗೆಲ್ಲುತ್ತದೆ ಎನ್ನುವುದನ್ನು ಹೇಳಲು ಮರೆತಿದ್ದಾರೆ. ಮರೆತಿದ್ದಾರೆಯೋ ಅಥವಾ ಬೇಕೆಂದೇ ಹೇಳಲಿಲ್ಲವೋ? ಅವರೇ ಹೇಳಬೇಕು. ಎಷ್ಟೇ ಆಗಲಿ, ಅವರ ಜಾಣತನ ಜಗಜ್ಜಾಹೀರು ಎಂದು ಟಾಂಗ್‌ ನೀಡಿದ್ದಾರೆ.

ಸುಳ್ಳುಸಂಕಲ್ಪ ಯಾತ್ರೆಗೆ ನನ್ನ ಶುಭಾಶಯ

ಅಶೋಕ್ ಸಾಹೇಬ್ರು ವಿಜಯ ಸಂಕಲ್ಪಕ್ಕೆ ಬದಲಾಗಿ ಸುಳ್ಳುಸಂಕಲ್ಪ ಮಾಡಿಕೊಂಡೇ ರಾಜ್ಯವನ್ನು ಸುತ್ತುತ್ತಿದ್ದಾರೆ. ಅವರ ಸುಳ್ಳುಸಂಕಲ್ಪ ಯಾತ್ರೆಗೆ ನನ್ನ ಶುಭಾಶಯಗಳು ಹಾಗೂ ಗಾಢ ಸಾಂತ್ವನಗಳು. ಆದರೆ, ಅವರ ಕಾಮಾಲೆ ಮನಸ್ಸಿನ, ಅದರ ಅರೆಬೆಂದ ಲೆಕ್ಕದ ಬಗ್ಗೆ ನನ್ನ ಅನುಕಂಪವಿದೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಕಂಡವರ ತಟ್ಟೆಯಲ್ಲಿ ನೊಣ ಹುಡುಕುವುದು ಬಿಜೆಪಿಗೆ ಅಂಟಿದ ಜಾಡ್ಯ ಮತ್ತು ಆಜನ್ಮಪರ್ಯಂತ ಬಂದಿರುವ ಚಾಳಿ. ನಮ್ಮ ಪಕ್ಷ ಬಿಡೋರ ಮಾತು ಹಾಗಿರಲಿ, ನಿಮ್ಮ ಪಕ್ಷದಲ್ಲಿ ವಾರದೊಪ್ಪತ್ತಿನಿಂದ ನಿರಂತರವಾಗಿ ಕೇಳಿಬರುತ್ತಿರುವ ಅರುಣರಾಗ, ವಿಜಯನಾದ ಕಥನಗಳ ಕಥೆ ಎನು ಅಶೋಕ್‌ ಅವರೇ? ಎಂದು ಪ್ರಶ್ನಿಸಿದ್ದಾರೆ.

20 ಸೀಟಿಗೇ ಕಟ್ಟಿ ಹಾಕಬಲ್ಲಿರಾ?

ನಿನ್ನೆ ದಿನ ನಿಮ್ಮ ಕೇಂದ್ರ ಗೃಹ ಸಚಿವರು ಅಮಿತ್ ಶಾ ಅವರು ಮಾಡಿದ ಪಂಚಾಯಿತಿ ಕಟ್ಟೆ ಪುರಾಣದ ಅಸಲಿಯೆತ್ತೇನು? ಈ ಬಿಜೆಪಿಯ ಗೃಹಭಂಗದಿಂದ ಯಾರಿಗೆ ದುಃಖ? ಯಾರಿಗೆ ಸಂತೋಷ? ಕೊಂಚ ಹೇಳಬಲ್ಲಿರಾ ಅಶೋಕ್‌ ಅವರೇ? ಇಷ್ಟೆಲ್ಲಾ ಅವಾಂತರ, ಹಗರಣಗಳ ಹೊಲಸು ಮೆತ್ತಿಕೊಂಡಿರುವ ನೀವು, ನಮ್ಮನ್ನು 20 ಸೀಟಿಗೇ ಕಟ್ಟಿ ಹಾಕಬಲ್ಲಿರಾ? 40% ನಾಯಕರಾದ ನಿಮ್ಮಲ್ಲಿ ಆ ಧಮ್ಮುತಾಕತ್ತು ಇದೆಯಾ? ಹಾಗಿದ್ದರೆ, ವಿಶ್ವವಂದ್ಯ ಪ್ರಧಾನಿಗಳು ಅಷ್ಟು ಬಿಡುವಾಗಿ ಕರ್ನಾಟಕಕ್ಕೆ ಪದೇಪದೆ ಓಡೋಡಿ ಬರುತ್ತಾರೇಕೆ? ಅಮಿತ್ ಶಾರವರ ಅಪರಿಮಿತ ಭೇಟಿಗಳು ಯಾಕೋ? ಪಾಪ.. ನಿಮ್ಮ ಫಜೀತಿ ಎಂದು ಲೇವಡಿ ಮಾಡಿದ್ದಾರೆ.

ಓಡು ಮಗಾ,ಓಡು ಮಗಾ ಸರದಿ

ಚುನಾವಣೆ ಆಗಲಿ, ಫಲಿತಾಂಶ ಬರಲಿ. ಓಡು ಮಗಾ,ಓಡು ಮಗಾ ಸರದಿ ಯಾರದ್ದೆನ್ನುವುದು ಜನಕ್ಕೇ ಗೊತ್ತಾಗುತ್ತದೆ. ಎಷ್ಟಾದರೂ ಓಡು ಮಗಾ ರೇಸ್ʼನಲ್ಲಿ ನಿಮ್ಮನ್ನು ಸರಿಗಟ್ಟುವ ವೀರರೂ ಶೂರರೂ ಕರ್ನಾಟಕದಲ್ಲಿ ಇದ್ದಾರೆಯೇ? ಆಪರೇಷನ್ ಕಮಲಕಾಂಡದಲ್ಲಿ ನಿಮ್ಮದೂ ಒಂದು ತುಕ್ಕುಹಿಡಿದ ಅಧ್ಯಾಯವಿದೆಯಲ್ಲಾ? ಸಾಮ್ರಾಟ್ ಅಶೋಕೂ ಮತ್ತು ಆಪರೇಷನ್ ಕಮಲವೂ ಎಂದು ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES