ಬೆಂಗಳೂರು : ಶಿವಮೊಗ್ಗ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತವರು ಜಿಲ್ಲೆಯಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನು ಹಾಡಿ ಹೊಗಳಿದ್ದಾರೆ.
ಶಿವಮೊಗ್ಗದ ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜನತೆ ಯಡಿಯೂರಪ್ಪರನ್ನು ಸದಾ ಸ್ಮರಿಸುತ್ತಾರೆ ಎಂದು ಹೇಳಿದ್ದಾರೆ.
ಬಸವಕಲ್ಯಾಣ, ಉಡುತಡಿಯಲ್ಲಿ ಅವರ ಕೊಡುಗೆ ಇದೆ. ಶಿವಶರಣೆ, ವೈಚಾರಿಕ ಕ್ರಾಂತಿ ನಡೆಸಿದ ಅಕ್ಕಮಹಾದೇವಿಯವರ ಪ್ರತಿಮೆ ಸ್ಥಾಪಿಸಿ, ಶಿವಶರಣರಿಗೆ ದೊಡ್ಡ ಕಾಣಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ ತಿಳಿಸಿದ್ದಾರೆ.
ಬಸವಣ್ಣರ ಬಳಿಕ ಕ್ರಾಂತಿ
12ನೇ ಶತಮಾನದಲ್ಲಿ ಬಸವಣ್ಣರ ಬಳಿಕ ಈಗ ಬಿ.ಎಸ್ ಯಡಿಯೂರಪ್ಪನವರು ಕ್ರಾಂತಿ ಮಾಡಿದ್ದಾರೆ. ಯಡಿಯೂರಪ್ಪ ಹಾಗೂ ರಾಮಕೃಷ್ಣ ಹೆಗ್ಗಡೆ ನಾಯಕತ್ವ ಹುಟ್ಟುಹಾಕಿದರು. ಬಿಎಸ್ ವೈ ರಾಜಕೀಯದಿಂದ ಎಂದೂ ನಿವೃತ್ತಿಯಾಗಲ್ಲ. ಸಮಾಜದಲ್ಲಿ ಸಾಕಷ್ಟು ಜನ ಸ್ವಾರ್ಥಿಗಳಿದ್ದಾರೆ. ಆದರೆ, ರಾಜಾಹುಲಿ ಕನಕದಾಸರ ಕಾಗಿನೆಲೆ, ಬಾಡಾ ಗ್ರಾಮ ಅಭಿವೃದ್ಧಿ ಮಾಡಿದ್ದು ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಇದೇ ವೇಳೆ 2018ರ ಸಾಲಿನ ಕೆ.ಎಸ್.ಆರ್.ಟಿ.ಸಿ ಗಾರ್ಡ್ ಹಾಗೂ ತಾಂತ್ರಿಕ ಅಧಿಕಾರಿಗಳು ಹುದ್ದೆ ತುಂಬುವ ಬಗ್ಗೆ ಪರಿಶೀಲಿಸುವುದಾಗಿ ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ.
ಅಕ್ಕಮಹಾದೇವಿಯ ಪುತ್ಥಳಿ ಅನಾವರಣ
ಶಿಕಾರಿಪುರದ ಉಡುತಡಿಯಲ್ಲಿ ಶಿವಶರಣೆ ಅಕ್ಕಮಹಾದೇವಿಯ 51 ಅಡಿ ಎತ್ತರದ ಪುತ್ಥಳಿ ಅನಾವರಣ, ಅಕ್ಷರಧಾಮ ಮಾದರಿಯ ಯಾತ್ರಾ ಸ್ಥಳದ ಉದ್ಘಾಟನೆ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯವನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಆನಂದಪುರದ ಮುರುಘರಾಜೇಂದ್ರ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ, ಬಿ.ಎ. ಬಸವರಾಜ, ಶಾಸಕ ಕುಮಾರ್ ಬಂಗಾರಪ್ಪ, ಸಂಸದ ಬಿ.ವೈ ರಾಘವೇಂದ್ರ ಇದ್ದರು.