ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, ಕೆಪಿಟಿಸಿಎಲ್ ಹಾಗೂ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಆರ್.ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೆ.ಪಿ.ಟಿ.ಸಿ.ಎಲ್ ಮತ್ತು ಎಸ್ಕಾಂಗಳ ಅಧಿಕಾರಿ ಮತ್ತು ನೌಕರರ ವೇತನವನ್ನು ಶೇ.20ರಷ್ಟು ಹಾಗೂ ಸಾರಿಗೆ ನೌಕರರ ವೇತನವನ್ನು ಶೇ.15ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಇಂದೇ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇನ್ನೂ ನಿನ್ನೆ (ಬುಧವಾರ) ಕೆ.ಪಿ.ಟಿ.ಸಿ.ಎಲ್ ನೌಕರರ ಸಂಘದ ಜೊತೆಗಿನ ಸಂಧಾನ ಸಭೆ ಸಫಲವಾಗಿದ್ದು, ಸಾರಿಗೆ ನೌಕರರ ಸಂಧಾನ ವಿಫಲವಾಗಿತ್ತು.
ಮುಷ್ಕರ ವಾಪಸ್ ಪಡೆದಿಲ್ಲ
ನೌಕರರ ವೇತನ ಹೆಚ್ಚಳ ಸಂಬಂಧ ಮಾತನಾಡಿರುವ ಸಾರಿಗೆ ಮುಖಂಡ ಅನಂತ ಸುಬ್ಬರಾವ್, ನಮ್ಮ ಜೊತೆಗೆ ಚರ್ಚೆ ಮಾಡದೆ ಏಕಾಏಕಿಯಾಗಿ ಘೋಷಣೆ ಮಾಡಿದ್ದು ಸರಿಯಲ್ಲ. ಸಿಎಂ ಬಸವರಾಜ್ ಬೊಮ್ಮಯಿ ಅವರ ನಡೆ ಸರಿಯಲ್ಲ. ನಮ್ಮನ್ನು ಕರೆದು ಮಾತುಕತೆ ಮಾಡಿ ವೇತನದ ಬಗ್ಗೆ ಘೋಷಣೆ ಮಾಡಬಹುದಿತ್ತು. ನಾವು ಸದ್ಯ ಮುಷ್ಕರ ವಾಪಸ್ ಪಡೆದಿಲ್ಲ ಎಂದು ಹೇಳಿದ್ದಾರೆ.