ಬೆಂಗಳೂರು : ಇಂದಿರಾ ಗಾಂಧಿ ಅವರ ಹೆಸರಿದೆ ಎಂಬ ಒಂದೇ ಕಾರಣಕ್ಕೆ ಕ್ಯಾಂಟೀನ್ ಗಳನ್ನು ಮುಚ್ಚಲು ಬಿಜೆಪಿ ಸರ್ಕಾರ ಮುಂದಾಗಿದೆ. ಕ್ಯಾಂಟೀನ್ ಮುಚ್ಚಿದರೆ ಬಡವರ ಶಾಪ ಈ ಸರ್ಕಾರಕ್ಕೆ ತಟ್ಟಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿರುವ ಬಿಜೆಪಿ ನಡೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ ಸರ್ಕಾರ ಇರುವಾಗ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿದ್ದೆವು. ಬೆಂಗಳೂರಿನ ಎಲ್ಲಾ 198 ವಾರ್ಡ್ ಗಳಲ್ಲಿ ಆರಂಭ ಮಾಡಿದ್ದೆವು.
ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಆರಂಭ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು. ಅಷ್ಟೊತ್ತಿಗೆ ನಮ್ಮ ಸರ್ಕಾರ ಅಧಿಕಾರದಿಂದ ಹೋಗಿ ಸಮ್ಮಿಶ್ರ ಸರ್ಕಾರ ಬಂದಿತು. ಆಪರೇಷನ್ ಕಮಲದ ಅನೈತಿಕ ಮಾರ್ಗದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ : ರಾಹುಲ್ ಗಾಂಧಿ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ : ಮಲ್ಲಿಕಾರ್ಜುನ ಖರ್ಗೆ
400 ಇಂದಿರಾ ಕ್ಯಾಂಟೀನ್ ಸ್ಥಾಪನೆ
ಕ್ಯಾಂಟೀನ್ ಸ್ಥಾಪನೆಯ ನಮ್ಮ ಉದ್ದೇಶ ಬಡವರು, ಹಳ್ಳಿಗಳಿಂದ ಬರುವ ಜನರು, ಆಸ್ಪತ್ರೆಗಳಿಗೆ ಬರುವವರು, ವಿದ್ಯಾರ್ಥಿಗಳು ಮುಂತಾದವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಪದಾರ್ಥಗಳು ಸಿಗಬೇಕು ಎಂಬುದಾಗಿತ್ತು. ನಾವು 400 ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪನೆ ಮಾಡಿದ್ದೆವು. ಇಂದಿರಾ ಗಾಂಧಿ ಅವರ ಹೆಸರಿಟ್ಟು ಕ್ಯಾಂಟೀನ್ ಗಳನ್ನು ಆರಂಭ ಮಾಡಿದೆವು. ಈಗಿನ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಗಳನ್ನು ಶಾಶ್ವತವಾಗಿ ಮುಚ್ಚಲು ಹೊರಟಿದೆ ಎಂದು ಆರೋಪಿಸಿದ್ದಾರೆ.
ಬ್ಯಾಡಗಿ, ಹಿರೇಕೆರೂರಿನಲ್ಲಿ ಬಂದ್
ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿದ್ದ ಇಂದಿರಾ ಕ್ಯಾಂಟೀನನ್ನು ಮುಚ್ಚಿದ್ದಾರೆ. ಬ್ಯಾಡಗಿ, ಹಿರೇಕೆರೂರಿನಲ್ಲಿ ಇಂದಿರಾ ಕ್ಯಾಂಟೀನ್ ನಡೆಯುತ್ತಿದೆಯಾ ಎಂದು ಕೇಳಿದೆ, ಈ ಎಲ್ಲಾ ಕಡೆ ಮುಚ್ಚಿದ್ದಾರಂತೆ. ಪ್ರತಿ ಹೊತ್ತು ಸುಮಾರು 500 ಜನ ಒಂದೊಂದು ಕ್ಯಾಂಟೀನ್ ನಲ್ಲಿ ತಿಂಡಿ, ಊಟ ಮಾಡುತ್ತಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿದೆ ಎಂಬ ಕಾರಣಕ್ಕೆ ಈ ಕ್ಯಾಂಟೀನ್ ಗಳನ್ನು ಮುಚ್ಚಲು ಹೋಗಬಾರದು ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.