ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಬರದ ಸಿದ್ಧತೆ ನಡೆಸುತ್ತಿವೆ. ಇತ್ತ, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ರಾಜ್ಯ ನಾಯಕರು ತಮ್ಮದೇ ಆದ ಹೇಳಿಕೆ ನೀಡುತ್ತಿದ್ದಾರೆ.
ಈ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಚುನಾವಣಾ ಅಧಿಸೂಚನೆ ಹೊರ ಬಿದ್ದ ನಂತರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ.
ಆಂತರಿಕ ಹಾಗೂ ಬಾಹ್ಯ ಸಮೀಕ್ಷೆ
ಈಗಾಗಲೇ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಆಂತರಿಕ ಹಾಗೂ ಬಾಹ್ಯ ಸಮೀಕ್ಷೆ ಆರಂಭವಾಗಿದ್ದು, ಆಂತರಿಕ ಸಮೀಕ್ಷೆಗಾಗಿ ರಾಷ್ಟ್ರೀಯ ನಾಯಕರನ್ನು ಒಳಗೊಂಡ 10 ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ ರಾಷ್ಟ್ರೀಯ ನಾಯಕರು ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ಬಾಹ್ಯ ಸಮೀಕ್ಷೆಗಾಗಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ಅಂತಿಮವಾಗಿ ಬಿಜೆಪಿ ಸಂಸದೀಯ ಮಂಡಳಿ ಪಟ್ಟಿ ಪ್ರಕಟಿಸಲಿದೆ. ಚುನಾವಣೆಗೆ ಸ್ಪರ್ಧಿಸಲು ಯಾವುದೇ ವಯಸ್ಸಿನ ಮಿತಿಯನ್ನು ಪಕ್ಷ ನಿಗದಿಪಡಿಸಿಲ್ಲ ಎಂದು ಸಿ.ಟಿ ರವಿ ಮಾಹಿತಿ ನೀಡಿದ್ದಾರೆ.