ಬೆಂಗಳೂರು : ಸಿಲಿಕಾನ್ ಸಿಟಿ ಮಂದಿಗೆ ಇದು ನಿಜಕ್ಕೂ ಬೆಚ್ಚಿ ಬೀಳುವ ಸುದ್ದಿ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಡ್ರಮ್ ಹಾಗೂ ಚೀಲದಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿತ್ತು. ಇದೀಗ ಅದೇ ಮಾದರಿಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಬೆಂಗಳೂರು ಮಂದಿ ಆತಂಕಕ್ಕೊಳಗಾಗಿದ್ದಾರೆ.
ಹೌದು, ಬೆಂಗಳೂರಿನ ಬೈಯ್ಯಪ್ಪನಹಳ್ಳಿ ರೈಲ್ವೆ ಸ್ಟೇಷನ್ ಬಳಿ ಮಹಿಳೆ ಶವ ಪತ್ತೆಯಾಗಿದೆ. ಮಹಿಳೆಯ ಶವವನ್ನು ಡ್ರಮ್‌ನಲ್ಲಿ ಹಾಕಿಕೊಂಡು ಬಂದು ಬೈಯ್ಯಪ್ಪನಹಳ್ಳಿ ರೈಲ್ವೆ ಸ್ಟೇಷನ್ ಬಳಿ ಇಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಸೋಮವಾರ ರಾತ್ರಿ 7 ಗಂಟೆ ಸುಮಾರಿನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ರೈಲ್ವೆ ನಿಲ್ದಾಣದ ಎಂಟ್ರಿ ಗೇಟ್ ಬಳಿ ಒಂದು ಡ್ರಮ್ ಪತ್ತೆಯಾಗಿದೆ. ಈ ಡ್ರಮ್ ನಲ್ಲಿ ಕೆಟ್ಟ ವಾಸನೆ ಬಂದಿದೆ. ಇದರಿಂದ ಅನುಮಾನಗೊಂಡ ಆಟೋ ಚಾಲಕರೊಬ್ಬರು ಡ್ರಮ್ ಓಪನ್ ಮಾಡಿದ್ದಾರೆ. ಡ್ರಮ್ ಮುಚ್ಚುಳ ತೆರೆಯುತ್ತಿದ್ದಂತೆ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಮಹಿಳೆ ಶವ ನೋಡಿ ಶಾಕ್
ಮಹಿಳೆ ಶವ ನೋಡಿ ಆಟೋ ಚಾಲಕ ಗಾಬರಿಯಾಗಿದ್ದಾನೆ. ಕೂಡಲೇ, ಪೊಲೀಸರಿಗೆ ಸುದ್ದಿ ತಿಳಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿ ಎಫ್‌ಎಸ್‌ಎಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಡ್ರಮ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಮಹಿಳೆ 35ವರ್ಷದ ಆಸುಪಾಸಿನವಳೆಂದು ತಿಳಿದುಬಂದಿದೆ.
ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಸಿಕ್ಕ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆಟೋದಲ್ಲಿ ಬಂದು ಡ್ರಮ್ ಇಟ್ಟು ಎಸ್ಕೇಪ್ ಆಗಿರುವ ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.
ಯಶವಂತಪುರ ಹಾಗೂ ಬೈಯ್ಯಪ್ಪನಹಳ್ಳಿಯಲ್ಲಿ ಇದೇ ರೀತಿ ಡ್ರಮ್ ಹಾಗೂ ಚೀಲದಲ್ಲಿ ಮಹಿಳೆಯರ ಶವಗಳ ಪತ್ತೆಯಾಗಿತ್ತು. ಮತ್ತೆ ಅದೇ ಮಾದರಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಇದರ ಹಿಂದೆ ಕಿಲ್ಲರ್ ಗ್ಯಾಂಗ್ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.