ಬೆಂಗಳೂರು : ಈ ಬಾರಿಯ ಆಸ್ಕರ್ ಭಾರತಕ್ಕೆ ತುಂಬಾ ವಿಶೇಷವಾಗಿತ್ತು. ಅತ್ಯುತ್ತಮ ಕಿರು ಚಿತ್ರ ವಿಭಾಗದಲ್ಲಿ ದಕ್ಷಿಣ ಭಾರತದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರು ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಒಲಿದು ಬಂದಿದೆ. ಮುದುಮಲೈ ಟೈಗರ್ ರಿಸ್ಪರರ್ಸ್ ನಲ್ಲಿ ಅನಾಥ ಆನೆ ಮರಿಯನ್ನು ದಂಪತಿ ಪೋಷಿಸುವುದನ್ನು ಈ ಕಿರು ಚಿತ್ರ ಹೊಂದಿದೆ. ಈ ಕಿರು ಚಿತ್ರಕ್ಕೆ ಆಸ್ಕರ್ ಒಲಿದ ಬಳಿಕ ಆ ಆನೆ ಮರಿಯನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ.
ಹೌದು, ಎಲಿಫೆಂಟ್ ವಿಸ್ಪರರ್ಸ್ ಭಾರತದ ಮೊದಲ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸಾಕ್ಷ್ಯಚಿತ್ರವಾಗಿದೆ. 95ನೇ ಅಕಾಡೆಮಿ ಪ್ರಶಸ್ತಿಯಲ್ಲಿ ‘ಸ್ಟ್ರೇಂಜರ್ ಅಟ್ ದಿ ಗೇಟ್’ ಮತ್ತು ‘ಹೌ ಡು ಯು ಮೆಷರ್ ಎ ಇಯರ್’ ನಂತಹ ಸಾಕ್ಷ್ಯಚಿತ್ರಗಳನ್ನು ಹಿಂದಿಕ್ಕಿ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೀಗಾ ಈ ಸಾಕ್ಷ್ಯಚಿತ್ರದಲ್ಲಿ ಸಾಕಷ್ಟು ಜನರ ಮನಗೆದ್ದ ಮರಿ ಆನೆ ರಘು ಭಾರೀ ಸುದ್ದಿಯಲ್ಲಿದೆ.
ತಮಿಳುನಾಡಿನ ಮುದುಮಲೈ ಅರಣ್ಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದ್ದು, ರಘು ಆನೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮುದುಮಲೈ ತೆಪ್ಪಕಾಡುಗೆ ಬರುವುದನ್ನು ಕಾಣಬಹುದು.
ಪ್ರಕೃತಿ-ಬುಡಕಟ್ಟು ಜನರ ಸಾಮರಸ್ಯ
ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಅನಾಥ ಮರಿ ಆನೆಗಳನ್ನು ದತ್ತು ತೆಗೆದುಕೊಳ್ಳುವ ಸುತ್ತ ಸುತ್ತುವ ಭಾವನಾತ್ಮಕ ಕಥೆ ಇದಾಗಿದ್ದು, ಪ್ರಕೃತಿಯೊಂದಿಗಿನ ಬುಡಕಟ್ಟು ಜನರ ಸಾಮರಸ್ಯವನ್ನೂ ತಿಳಿಸುತ್ತದೆ.
‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರ ನೆಟ್ಫ್ಲಿಕ್ಸ್ನಲ್ಲಿ ತಮಿಳು ಭಾಷೆಯಲ್ಲಿದ್ದು, ಈಗ ಮತ್ತೇ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಕಿರುಚಿತ್ರದಲ್ಲಿ ಆನೆಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ರಕ್ಷಣೆ ಕುರಿತ ಸಂದೇಶವೂ ಇದೆ.