ಬೆಂಗಳೂರು : ತಮ್ಮ ಮುಂದಿನ ರಾಜಕೀಯ ನಡೆಯನ್ನು ಬಹಿರಂಗಪಡಿಸಲು ಸುದ್ದಿಗೋಷ್ಠಿ ನಡೆಸಿದ ಸಂಸದೆ ಸುಮಲತಾ ಅಂಬರೀಶ್, ಎರಡು ಪಕ್ಷಗಳಿಂದ ಟಿಕೆಟ್ ಆಫರ್ ಬಂದಿತ್ತು ಎಂದು ಸ್ಫೋಟಕ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪುತ್ರ ಅಭಿಷೇಕ್ ಅಂಬರೀಶ್ ವಿಧಾನಸಭೆ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನಾನು ರಾಜಕಾರಣದಲ್ಲಿ ಇರುವ ತನಕ ನನ್ನ ಮಗ ರಾಜಕಾರಣಕ್ಕೆ ಬರುವುದಿಲ್ಲ ಎಂದು ಘೋಷಿಸಿದ್ದಾರೆ.
ಅಭಿಷೇಕ್ ಅಂಬರೀಶ್‌ಗೆ ಎರಡು ಪಕ್ಷಗಳು ಟಿಕೆಟ್ ನೀಡುವಂತೆ ಮುಂದೆ ಬಂದಿದ್ದರೂ ಅದನ್ನು ತಿರಸ್ಕರಿಸಿದ್ದೇನೆ. ರಾಜಕಾರಣದಲ್ಲಿ ನಾನು ಇಲ್ಲಿ ತನಕ ಕುಟುಂಬ ರಾಜಕಾರಣ ಮಾಡಿಲ್ಲ ಎಂದು ಚಾಮುಂಡಿ ತಾಯಿ ಮೇಲೆ ಸುಮಲತಾ ಆಣೆ ಮಾಡಿದ್ದಾರೆ.
ನಯವಾಗಿಯೇ ಆಫರ್ ತಿರಸ್ಕರಿಸಿದೆ
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಮಗ ಅಭಿಷೇಕ್ ಗೆ ಟಿಕೆಟ್ ಕೇಳಿಲ್ಲ, ಕೇಳುವುದೂ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಪುತ್ರನಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಂದ ಟಿಕೆಟ್ ಕೊಡುವ ಆಹ್ವಾನ ಬಂದಿತ್ತು. ಅದನ್ನು ನಯವಾಗಿಯೇ ತಿರಸ್ಕರಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಇದು ‘ಸ್ವಾಭಿಮಾನಿ’ ಸುಮಲತಾ ಜಾಣ ನಡೆ
ಬಿಜೆಪಿ ಸೇರ್ಪಡೆ ಕನಸಿಗೂ ತಣ್ಣೀರು
ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಯಾಗುವ ಕನಸಿಗೂ ತಣ್ಣೀರು ಎರಚಿದಂತಾಗಿದೆ. ಲೋಕಸಭಾ ಚುನಾವಣೆ ನಡೆದು ಆರು ತಿಂಗಳ ಒಳಗೆ ಯಾವುದೇ ಪಕ್ಷವನ್ನು ಸೇರಬಹುದಾಗಿದೆ. ಆದರೆ, ಈಗ ಬಿಜೆಪಿ ಸೇರ್ಪಡೆಗೂ ಸಂವಿಧಾನ ನಿಯಮಗಳು ಅಡ್ಡಿ ಬರುತ್ತಿವೆ.