ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದ ಸುಮಲತಾ ಅಂಬರೀಶ್ ರಾಜ್ಯ ರಾಜಕೀಯ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ. ಯಾವುದೇ ಪಕ್ಷದ ಆಫರ್ ಗಳಿಗೆ ಕಿವಿಗೊಡದೇ ಸ್ವತಂತ್ರವಾಗಿಯೇ ಉಳಿದಿದ್ದ ರೆಬೆಲ್ ಲೇಡಿ ಕಮಲ ಹಿಡಿಯಲಿದ್ದಾರೆ ಎಂದು ವರದಿಯಾಗಿದೆ.
ಹೌದು, ಸ್ವಾಭಿಮಾನಿ ಸುಮಲತಾ ಅಂಬರೀಶ್ ಬಿಜೆಪಿ ಪಕ್ಷ ಸೇರುವುದು ಪಕ್ಕಾ ಆಗಿದ್ದು, ಇಂದು ಮಧ್ಯಾಹ್ನ ಮಂಡ್ಯದ ತಮ್ಮ ನಿವಾಸ ಚಾಮುಂಡೇಶ್ವರಿಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ (ಗುರವಾರ) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಬಿಜೆಪಿ ಪಕ್ಷ ಸೇರುವುದಕ್ಕೆ ಅಂತಿಮ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ
ಆಪ್ತರಿಗಾಗಿ ‘ಕಮಲ’ತಾ ಆಗಲಿದ್ದಾರೆ?
ಮಂಡ್ಯದ ಕೆಲವು ಕ್ಷೇತ್ರಗಳಲ್ಲಿ ತಮ್ಮಆಪ್ತರು ಹಾಗೂ ಬೆಂಬಲಿಗರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂಬ ಡಿಮ್ಯಾಂಡ್ ಇಟ್ಟು ಬಿಜೆಪಿ ಸೇರಲು ಸುಮಲತಾ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಮಾ.12ರಂದು ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನನ್ನ ಮಾತುಗಳನ್ನು ವೀಕ್ಷಿಸಿ ಎಂದ ಸುಮಲತಾ
ಇಂದು ಮಧ್ಯಾಹ್ನ 12ಕ್ಕೆ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ ನನ್ನ ನಿವಾಸದಿಂದ ಪತ್ರಿಕಾಗೋಷ್ಠಿ ಆಯೋಜನೆ ಮಾಡಿದ್ದೇನೆ. ಸ್ವಾಭಿಮಾನಿ ಮಂಡ್ಯದ ಜನರ ಪರವಾಗಿ ಒಂದಷ್ಟು ವಿಷಯಗಳನ್ನು ಹಂಚಿಕೊಳ್ಳಲಿದ್ದೇನೆ. ನನ್ನ ಮಾತುಗಳನ್ನು ಈ(Sumalatha Ambareesh) ಪೇಜ್ ನಲ್ಲಿ ಲೈವ್ (LIVE) ಆಗಿ ತಾವು ವೀಕ್ಷಿಸಬಹುದು ಎಂದು ಸುಮಲತಾ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.