ಬೆಂಗಳೂರು : ರಾಜ್ಯದಲ್ಲಿ ಭಷ್ಟಾಚಾರ ತಾಂಡವಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇರವಾಗಿಯೇ ವಸೂಲಿಗೆ ಇಳಿದಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ಕೊಟ್ಟಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಜಾವಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿ.ಕೆ.ಶಿವಕುಮಾರ್ ಜೈಲಿಗೆ ಯಾಕೆ ಹೋಗಿದ್ರು? ಈ ಬಗ್ಗೆ ಮೊದಲು ಅವರು ಕೇಳಿಕೊಳ್ಳಲಿ. ರಾಜ್ಯದ ಜನರಿಗೆ ಉತ್ತರ ಕೊಡಲಿ ಎಂದು ಕುಟುಕಿದ್ದಾರೆ.
ಡಿಕೆಶಿ ಆಸ್ತಿ ಲೆಕ್ಕ ತೆಗೆಯಲಿ
ಡಿ.ಕೆ ಶಿವಕುಮಾರ್ ಅವರ ಮನೆಯಲ್ಲಿ ಅಪಾರ ಪ್ರಮಾಣದ ಹಣ ಹೇಗೆ ಬಂತು. ಅವರು ರಾಜಕೀಯಕ್ಕೆ ಬರುವ ಮೊದಲು ಅವರ ಒಟ್ಟು ಆಸ್ತಿ, ಹಣ ಎಷ್ಟಿತ್ತು? ಇವತ್ತು ಅವರ ಆಸ್ತಿ, ಹಣ ಎಷ್ಟಿದೆ ಎಂಬುದರ ಲೆಕ್ಕ ತೆಗೆಯಲಿ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಸರ್ಕಾರದ ಬೆಂಬಲದಿಂದಲೇ ಮಾಡಾಳ್ ಗೆ ಜಾಮೀನು : ರಾಮಲಿಂಗಾರೆಡ್ಡಿ ಆರೋಪ
ಕಾಂಗ್ರೆಸ್ ಭ್ರಷ್ಟಾಚಾರದ ಜನಕ
ದೇಶದೊಳಗೆ ಭ್ರಷ್ಟಾಚಾರದ ನಿರ್ಮಾಪಕರು, ಭ್ರಷ್ಟಾಚಾರದ ಜನಕರೇ ಕಾಂಗ್ರೆಸ್ ಪಾರ್ಟಿಯವರು. ಬಿಜೆಪಿ ಅಥವಾ ಇನ್ನಿತರೇ ಯಾವುದೇ ಪಾರ್ಟಿ ಅಧಿಕಾರದ ಹತ್ತಿರಕ್ಕೆ ಬಂದಿರೋದು ಅವರಿಗೆ ಸಹಿಸಲು ಆಗುತ್ತಿಲ್ಲ. 25 ವರ್ಷ ಸತತವಾಗಿ ದೇಶದ ಜನರನ್ನು ಕತ್ತಲೆಯಲ್ಲಿಟ್ಟು ಭ್ರಷ್ಟಾಚಾರದ ಮೇಲೆ ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸಿದೆ.
ಇತ್ತೀಚಿನ 20-25 ವರ್ಷದ ಕಾಂಗ್ರೆಸ್‌ನ ಕಾಲದಲ್ಲಿ ಭ್ರಷ್ಟಾಚಾರ ಅನ್ನುವ ಶಬ್ದ ಕಡಿಮೆ ಆಯ್ತು. ಹಗರಣಗಳು ಶುರುವಾಯ್ತು. ಈ ಹಗರಣಗಳನ್ನು ಶುರು ಮಾಡಿದಂತಹ ಕಾಂಗ್ರೆಸ್ ಪಕ್ಷ ಹಾಗೂ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ಛೇಡಿಸಿದ್ದಾರೆ.