Monday, December 23, 2024

ಅಜನೀಶ್ ಟ್ಯೂನ್, ಭಟ್ರ ಲೈನ್ : ಡಾಲಿ ‘ಪ್ರೇಮ ನಿವೇದನೆ’ಯ ರೊಮ್ಯಾಂಟಿಕ್ ಸಾಂಗ್ ಅದ್ಭುತ..!

ಬೆಂಗಳೂರು : ನಟ ಡಾಲಿ ಧನಂಜಯ.. ನಟರಾಕ್ಷಸನಾಗಿ ಮಾಸ್ ಖದರ್ ತೋರೋಕೂ ರೆಡಿ, ಪ್ರೇಮಿಯಾಗಿ ಪ್ರೀತಿ ಹಂಚೋಕೂ ಸೈ. ಇಂಥ ನಟನಾ ಚಾತುರ್ಯ ಡಾಲಿಗೆ ಕರಗತವಾಗಿದೆ.

ಹೌದು, ಡಾಲಿ ಧನಂಜಯ ಅವರ ಬಹುನಿರೀಕ್ಷಿತ ಹೊಯ್ಸಳ ಚಿತ್ರದ ಹೊಚ್ಚ ಹೊಸ ಹಾಡೊಂದು ರಿಲೀಸ್ ಆಗಿದ್ದು, ಅದರಲ್ಲಿ ಪತ್ನಿಗೆ ಪ್ರೇಮ ನಿವೇದನೆ ಮಾಡೋ ಪರಿ ನಿಜಕ್ಕೂ ನೋಡುಗರ ಹೃದಯಕ್ಕೆ ನಾಟುವಂತಿದೆ.

ಗನ್ ಹಿಡಿದು ಗುಂಡಿನ ಸುರಿಮಳೆ ಸುರಿಸುತ್ತಿದ್ದ ಪೊಲೀಸ್ ಕಾಪ್ ಗುರುದೇವ್(ಡಾಲಿ), ಇದೀಗ ರೊಮ್ಯಾಂಟಿಕ್ ಪತಿಯಾಗಿಯೂ ಮಿಂಚುತ್ತಿದ್ದಾರೆ. ಮಡದಿ ಅಮೃತಾಗೆ ರೂಪಸಿ ನೀನು, ರಾಕ್ಷಸ ನಾನು ಅಂತ ಪ್ರೇಮ ನಿವೇದನೆ ಮಾಡುತ್ತ್ತಿದ್ದಾರೆ. ಇದು ಎಂಥಾ ಭಾವನೆ ಎನ್ನುವ ಈ ರೊಮ್ಯಾಂಟಿಕ್ ಸಾಂಗ್ ಹೊಯ್ಸಳ ಚಿತ್ರಕ್ಕೆ ಕ್ಲಾಸ್ ಟಚ್ ಕೊಟ್ಟಿದೆ.

ಅಜನೀಶ್ ಟ್ಯೂನ್.. ಭಟ್ರ ಲೈನ್..

ಹೊಯ್ಸಳ ಚಿತ್ರದಲ್ಲಿ ಪತ್ನಿ ಪಾತ್ರದಲ್ಲಿ ಬಣ್ಣ ಹಚ್ಚಿರೋ ನಟಿ ಅಮೃತಾ ಅಯ್ಯಂಗಾರ್​ಗೆ ರೂಪಸಿ ನೀನು, ರಾಕ್ಷಸ ನಾನು ಅನ್ನೋ ಡಾಲಿ ಧನಂಜಯ, ವಿಭಿನ್ನ ಶೈಲಿಯಲ್ಲಿ ಪ್ರೇಮಾರ್ಚನೆ ಮಾಡಿಸ್ತಾರೆ. ಈ ಅರ್ಥಪೂರ್ಣ ಸಾಲುಗಳು ವಿಕಟಕವಿ ಯೋಗರಾಜ್ ಭಟ್​ರ ಲೇಖನಿಯಿಂದ ಅರಳಿದ್ದು, ಟ್ರೆಂಡಿಂಗ್ ಮ್ಯೂಸಿಕ್ ಕಂಪೋಸರ್ ಅಜನೀಶ್ ಲೋಕನಾಥ್ ಟ್ಯೂನ್ ಮನಸ್ಸಿಗೆ ಹಿತ ಅನಿಸ್ತಿದೆ. ಇನ್ನು ಹರಿಚರಣ್ ಗಾಯನದಲ್ಲಿ ಅಷ್ಟೇ ಸುಮಧುರವಾಗಿ ಮೂಡಿಬಂದಿದೆ.

ಇದನ್ನೂ ಓದಿ : ದಾಖಲೆ ಮೊತ್ತಕ್ಕೆ ಕಬ್ಜ ತಮಿಳು ರೈಟ್ಸ್ ಸೇಲ್

ಈ ಹಿಂದೆ ಉಡುಪಿ ಹೋಟೆಲು, ಮೂಲೆ ಟೇಬಲು ಅನ್ನೋ ಹಾಡಿನಿಂದ ಮೋಡಿ ಮಾಡಿದ್ದ ಡಾಲಿ- ಅಮೃತಾ ಜೋಡಿ, ಇದೀಗ ಹೊಯ್ಸಳ ಚಿತ್ರದ ಈ ರೊಮ್ಯಾಂಟಿಕ್ ನಂಬರ್​ನಿಂದ ಮಗದೊಮ್ಮೆ ಎಲ್ಲರ ಗಮನ ಸೆಳೆದಿದೆ. ಇವ್ರ ಜೋಡಿಗೆ ಸ್ಪೆಷಲ್ ಫ್ಯಾನ್ ಫಾಲೋಯಿಂಗ್ ಇದ್ದು, ಇವರಿಬ್ಬರು ನಿಜ ಜೀವನದಲ್ಲೂ ಸಹ ಒಂದಾದ್ರೆ ಚೆನ್ನಾಗಿರಲಿದೆ ಅಂತ ಆಶಿಸೋ ಬಳಗವಿದೆ.

ಡಾಲಿ ನಟನೆಯ 25ನೇ ಸಿನಿಮಾ

ಇನ್ನೂ, ಹೊಯ್ಸಳ ಡಾಲಿ ಧನಂಜಯ ನಟನೆಯ 25ನೇ ಸಿನಿಮಾ. ಸಿಲ್ವರ್ ಜ್ಯುಬಿಲಿ ಹಂತ ತಲುಪಿರೋ ಡಾಲಿಗೆ ಇದು ಬಹಳ ವಿಶಿಷ್ಟ ಸಿನಿಮಾ. ಸುಮಾರು 15ರಿಂದ 20 ಕೋಟಿ ಬಿಗ್ ಬಜೆಟ್​​ನಲ್ಲಿ ತಯಾರಾಗಿರೋ ಹೈ ವೋಲ್ಟೇಜ್ ಌಕ್ಷನ್ ವೆಂಚರ್ ಚಿತ್ರ. ಪೊಲೀಸ್ ಕಾಪ್ ಗುರುದೇವ್ ಆಗಿ ಡಾಲಿ ಖದರ್ ತೋರಲಿದ್ದು, ಖಾಕಿ ಪವರ್​ನ ಕೈಗನ್ನಡಿಯಾಗಲಿದೆ ಹೊಯ್ಸಳ ಸಿನಿಮಾ.

ಮಾ.30ಕ್ಕೆ ಸಿನಿಮಾ ತೆರೆಗೆ

ಟೈಟಲ್ ಸಾಂಗ್​​ಗಿಂತ ಈ ಹಾಡು ಸಖತ್ ಇಂಪ್ರೆಸ್ಸೀವ್ ಆಗಿದ್ದು, ಇದೇ ಮಾರ್ಚ್​ 30ಕ್ಕೆ ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದೆ. ಸಿನಿಮಾದಲ್ಲಿ ಡಾಲಿ ಜೊತೆ ಅಮೃತಾ ಅಯ್ಯಂಗಾರ್, ಹಿರಿಯ ನಟ ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿದಂತೆ ಒಂದಷ್ಟು ನುರಿತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾನ ವಿಜಯ್ ಎನ್ ನಿರ್ದೇಶನ ಮಾಡಿದ್ದು, ಕೆಆರ್​ಜಿ ಸ್ಟುಡಿಯೋ ಬ್ಯಾನರ್​​ನಡಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES