ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಭರ್ಜರಿ ತಾಲೀಮು ನಡೆಸುತ್ತಿವೆ. ಇದರ ಮಧ್ಯೆ, ನಮಗೆ ಈ ಬಾರಿ ಟಿಕೆಟ್ ಕೈಗೆಟುಕುವುದಿಲ್ಲ ಎಂಬ ಮುನ್ಸೂಚನೆ ಅರಿತು ಪಕ್ಷ ಬಿಟ್ಟು ಬೇರೆ ಪಕ್ಷ ಕೂಡಿಕೊಳ್ಳುವ ದಾಳ ಉರುಳಿಸುತ್ತಿದ್ದಾರೆ.
ಹೌದು, ಬಿಜೆಪಿ ಸಚಿವರಾದ ವಿ. ಸೋಮಣ್ಣ ಹಾಗೂ ನಾರಾಯಣಗೌಡ ಅವರು ಬಿಜೆಪಿ ತೊರೆಯುತ್ತಾರೆ ಎಂಬ ಸುದ್ದಿ ಹಬ್ಬಿದೆ. ಈ ನಡುವೆಯೇ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಕ್ ಎದುರಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಮನೋಹರ್ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಮನೋಹರ್ ಅವರು ರಾಜ್ಯ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.ಆದರೆ, ಟಿಕೆಟ್ ಸಿಗುವ ಖಾತರಿ ಇಲ್ಲದ ಹಿನ್ನೆಲೆಯಲ್ಲಿ ಮನೋಹರ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕಟೀಲ್ ಸ್ಫೋಟಕ ಹೇಳಿಕೆ : ಕಾಂಗ್ರೆಸ್-ಜೆಡಿಎಸ್ ಮನೆ ಖಾಲಿ!
ಮುಂಚೂಣಿ ನಾಯಕ ಮನೋಹರ್
ಮನೋಹರ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್ ಪಕ್ಷ ಹಮ್ಮಿಕೊಳ್ಳುತ್ತಿದ್ದ ಪ್ರತಿಭಟನೆಗಳಲ್ಲಿ ಅವರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ, ಅವರ ರಾಜೀನಾಮೆ ನಿರ್ಧಾರ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ಮನೋಹರ್ ರಾಜೀನಾಮೆಯನ್ನು ಕಾಂಗ್ರೆಸ್ ಪಕ್ಷ ಅಂಗೀಕಾರ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಾಂಗ್ರೆಸ್ ನಾಯಕರು ಯಾರೂ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.