ಬೆಂಗಳೂರು : ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೂಮಿ ಕೊಟ್ಟಿದ್ದು ಮುಸ್ಲಿಮರು ಎಂಬ ಕಾಂಗ್ರೆಸ್ ನಾಯಕ ಮಿಥುನ್ ರೈ ವಿವಾದಾತ್ಮಕ ಹೇಳಿಕೆಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Tirtha Swamiji) ಸ್ಪಷ್ಟನೆ ನೀಡಿದ್ದಾರೆ.
ತುಮಕೂರಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ಶ್ರೀಕೃಷ್ಣ ಮಠಕ್ಕೆ ವಿಜಯನಗರ ಸಾಮ್ರಾಜ್ಯದ ರಾಮಭೋಜರು ಭೂಮಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಭೂಮಿ ನೀಡಿದ್ದು ರಾಮಭೋಜರು
ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಯಾರು? ಮುಸ್ಲಿಂ ರಾಜರು ಅಲ್ಲವೇ ಅಲ್ಲ. 7ನೇ ಶತಮಾನದಲ್ಲಿ ರಾಮಭೋಜ ಭೂಮಿ ನೀಡಿದ್ದನು. ವಿಜಯನಗರ ಸಾಮ್ರಾಜ್ಯದ ಅರಸರು ಭೂಮಿ ನೀಡಿದ್ದಾರೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಇದನ್ನೂ ಓದಿ : ಶ್ರೀಕೃಷ್ಣ ಮಠಕ್ಕೆ ಭೂಮಿ ಕೊಟ್ಟಿದ್ದು ಮುಸ್ಲಿಮರು ಎಂದ ಕಾಂಗ್ರೆಸ್ ನಾಯಕ!
ಗುರುಗಳ ಹೇಳಿಕೆ ತಪ್ಪಾಗಿ ಅರ್ಥ
ಆಧಾರ ರಹಿತವಾಗಿ ಯಾರು, ಏನು ಬೇಕಾದರೂ ಹೇಳಬಹುದು. ಉಡುಪಿಯ ಅನಂತೇಶ್ವರ ಸನ್ನಿಧಾನ ಇರಬಹುದು. ಶ್ರೀಕೃಷ್ಣ ಮಠದ ಸನ್ನಿಧಾನ ಇರಬಹುದು ಅದನ್ನು ರಾಮಭೋಜ ಕೊಟ್ಟಿದ್ದು. ಗುರುಗಳ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಮಧ್ವಾಚಾರ್ಯರು ಶಿಷ್ಯರ ಜೊತೆಗೆ ಬದ್ರಿ ಯಾತ್ರೆಗೆ ಹೊರಟಿದ್ದರು. ಗಂಗಾ ನದಿ ದಾಟಲು ತುರ್ಕರ ರಾಜ ವ್ಯವಸ್ಥೆ ನಿಲ್ಲಿಸಿದ್ದನು ಎಂದು ಹೇಳಿದ್ದಾರೆ.
ಅರ್ಧ ರಾಜ್ಯ ದಾನ ಮಾಡಿದ್ದನು
ಆಗ ಮಧ್ವಾಚಾರ್ಯರು ಗಂಗಾ ನದಿಯನ್ನು ಈಜಿಯೇ ದಾಟಲು ಹೋಗಿದ್ದರು. ಮಧ್ವಾಚಾರ್ಯರ ತೀರ್ಮಾನದಿಂದಾಗಿ ರಾಜ ಅರ್ಧ ರಾಜ್ಯ ದಾನ ಮಾಡಿದ್ದನು. ಅದನ್ನೇ ನಮ್ಮ ಗುರುಗಳು ಉಲ್ಲೇಖ ಮಾಡಿದ್ದಾರೆ ಅಷ್ಟೇ. ಉಡುಪಿ ಮಠದ ಜಾಗವನ್ನು ಮುಸ್ಲಿಂ ರಾಜರು ನೀಡಿದ್ದರು ಅಂತಾ ಹೇಳಿಲ್ಲ. ಆಧಾರ ರಹಿತವಾದ ಹೇಳಿಕೆಯನ್ನು ಹೆಚ್ಚು ಮುಂದುವರಿಸುವುದು ಬೇಡ ಎಂದು ಶ್ರೀಗಳು ತಿಳಿಸಿದ್ದಾರೆ.