ಬೆಂಗಳೂರು : ಹೈ ಡೆನ್ಸಿಟಿ ಕಾರಿಡಾರ್ ಗಳಲ್ಲಿ ತಡೆರಹಿತ ವಾಹನ ಸಂಚಾರ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹೈ ಡೆನ್ಸಿಟಿ ಕಾರಿಡಾರ್ ಗಳಲ್ಲಿ ತಡೆರಹಿತ ವಾಹನ ಸಂಚಾರ ವ್ಯವಸ್ಥೆಗೊಳಿಸಲಾಗುತ್ತಿದ್ದು, ಸುರಕ್ಷತೆ, ವಾಹನ ಸಂಖ್ಯೆ ಪರಿಶೀಲಿಸುವ, ವಾಹನ ಸಾಮರ್ಥ್ಯವನ್ನು ಪರಿಶೀಲಿಸುವ ಆಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಕಾರಿಡಾರ್ ಗಳಿಗೆ ವಿಶೇಷವಾದ ಸೂಚನಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನೂತನ ತಂತ್ರಜ್ಞಾನದ ಕ್ಯಾಮೆರಾ
ಬೆಂಗಳೂರು ನಗರದ ವಾಹನ ದಟ್ಟಣೆ ನಿರ್ವಹಣೆಗಾಗಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಉನ್ನತ ಮಟ್ಟದ ನಿರ್ವಹಣೆಗಾಗಿ ವಿಶೇಷ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಸುಗಮ ಸಂಚಾರ ಹಾಗೂ ವಾಹನ ದಟ್ಟಣೆ ಕಡಿಮೆಗೊಳಿಸಲು ನೂತನ ತಂತ್ರಜ್ಞಾನದ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದರು.
ಇದನ್ನೂ ಓದಿ : ಬೆಂಗಳೂರಿಗರ ಆರೋಗ್ಯಕ್ಕೆ ವಿಶೇಷ ವ್ಯವಸ್ಥೆ : ಸಿಎಂ ಬೊಮ್ಮಾಯಿ
6 ಹೊಸ ಸಂಚಾರ ಪೊಲೀಸ್ ಠಾಣೆ
ಎರಡು ಸಂಚಾರ ಪೊಲೀಸ್ ಠಾಣೆಯ ಅಂತರದಲ್ಲಿ ಉಂಟಾಗುವ ವಾಹನದಟ್ಟಣೆಯ ನಿರ್ವಹಣೆಗೆ ನಾಲ್ಕು ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದ್ದು, 2023-24 ರಲ್ಲಿ 6 ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆಗಾಗಿ 9 ಹೊಸ ಪೊಲೀಸ್ ಠಾಣೆಗಳನ್ನು ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.