ಬೆಂಗಳೂರು : ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ಅವರನ್ನು ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಪಕ್ಷದಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಹೌದು, ಕೆಎಸ್ ಡಿಎಲ್ (KSDL) ಟೆಂಡರ್ ಹಗರಣದ ಆರೋಪದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮಾಡಾಳು ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ದಾಳಿ ವೇಳೆ ರೆಡ್ ಹ್ಯಾಂಡ್ ಆಗಿ ಮಗ ಸಿಕ್ಕಿಬಿದ್ದಿದ್ದರು. ಅಲ್ಲದೆ 8 ಕೋಟಿಗೂ ಅಧಿಕ ನಗದು ಪತ್ತೆಯಾಗಿತ್ತು.
ಲೋಕಾಯುಕ್ತ ದಾಳಿಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದರು. ಇಂದು ಮಧ್ಯಂತರ ಜಾಮೀನು ಸಿಕ್ಕ ಬಳಿಕ ಪ್ರತ್ಯಕ್ಷರಾಗಿದ್ದರು. ಇದೀಗ, ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಉಚ್ಛಾಟನೆ ಮಾಡಲಾಗಿದೆ ಎನ್ನಲಾಗಿದೆ.
ದೋಷ ಮುಕ್ತನಾಗಿ ಮತ್ತೆ ಪಕ್ಷಕ್ಕೆ ಸೇರುತ್ತೇನೆ
ಉಚ್ಛಾಟನೆ ಬಗ್ಗೆ ಖುದ್ದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಪ್ರತಿಕ್ರಿಯೆ ನೀಡಿದ್ದು, ಹೌದು, ಬಿಜೆಪಿ ಪಕ್ಷದ ನಾಯಕರು ಮಾಡಿರುವಂತಹ ಕ್ರಮ ಸರಿ ಇದೆ. ನನ್ನ ಮೇಲೆ ಆರೋಪ ಕೇಳಿ ಬಂದಾಗ ದೇಶದ ದೊಡ್ಡ ಪಕ್ಷಕ್ಕೆ ಕಳಂಕ ಆಗಬಾರದು. ಅವರು ತೆಗೆದುಕೊಂಡ ಕ್ರಮ ಸರಿ ಇದೆ. ನಾನು ದೋಷ ಮುಕ್ತನಾದ ಮೇಲೆ ಮತ್ತೆ ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳುತ್ತೇನೆ. ಅದರಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿಜೆಪಿ ಶಾಸಕ ಮಾಡಾಳ್ ಬಂಧನ ಆಗಲೇಬೇಕು : ಬಿ.ಎಸ್. ಯಡಿಯೂರಪ್ಪ
ವಾರದಿಂದ ಮಾಡಾಳ್ ಕಾಣೆ
ಪುತ್ರ ಹಾಗೂ ತನ್ನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದ ಹಿನ್ನೆಲೆಯಲ್ಲಿ ಕಳೆದ 6 ದಿನಗಳಿಂದ ವಿರೂಪಾಕ್ಷಪ್ಪ ಕಾಣೆಯಾಗಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್, ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಸಿಕ್ಕು ಮರಳಿ ಬಂದ ಮಾಡಾಳ್ ವಿರೂಪಾಕ್ಷಪ್ಪಗೆ ಚನ್ನಗಿರಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿತ್ತು. ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರ ಅದ್ದೂರಿ ಮೆರವಣಿಗೆ ಮಾಡಿ ಸಂಭ್ರಮಿಸಿದ್ದರು.
ಮಾಡಾಳ್ ಅವರ ಸಂಭ್ರಮಾಚರಣೆ ಬಿಜೆಪಿ ಪಕ್ಷಕ್ಕೆ ಮುಜುಗರ ತರಿಸಿತ್ತು. ಹೀಗಾಗಿ, ವಿರೂಪಾಕ್ಷಪ್ಪ ಅವರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಪಕ್ಷ ಘೋಷಣೆ ಮಾಡಿಲ್ಲ.