ಬೆಂಗಳೂರು : ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕೊನೆಗೂ ದಾವಣಗೆರೆ ಜಿಲ್ಲೆಗ ಚನ್ನಗಿರಿ ತಾಲೂಕಿನ ಚನ್ನೇಶಪುರದ ಬಳಿ ಪ್ರತ್ಯಕ್ಷರಾಗಿದ್ದಾರೆ. ಅಲ್ಲದೆ, ‘ನಾನು ಎಲ್ಲಿಗೂ ಓಡಿ ಹೋಗಿರಲಿಲ್ಲ, ಊರಲ್ಲೇ ಇದ್ದೆ’ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
6 ದಿನಗಳ ಬಳಿಕ ಪ್ರತ್ಯಕ್ಷರಾದ ಮಾಡಾಳ್ ಮೊದಲ ಪ್ರತಿಕ್ರಿಯೆ ನೀಡಿದ್ದು, ಲೋಕಾಯುಕ್ತ ದಾಳಿ ವೇಳೆ ನಮ್ಮ ಮನೆಯಲ್ಲಿ ಸಿಕ್ಕ ಹಣ ಸಂಪಾದಿತ ಹಣವಾಗಿದ್ದು, ಅದಕ್ಕೆ ಸೂಕ್ತ ದಾಖಲೆ ಒದಗಿಸುತ್ತೇನೆ ಎಂದು ತಿಳಿಸಿದ್ದಾರೆ.
‘ನಾನು ಎಲ್ಲಿಗೂ ಓಡಿ ಹೋಗಿರಲಿಲ್ಲ, ಊರಲ್ಲೇ ಇದ್ದೆ. ಆಪಾದನೆ ಕೇಳಿ ಬಂದಿದ್ದರಿಂದ ಜನರ ಸಂಪರ್ಕಕ್ಕೆ ಬಂದಿರಲಿಲ್ಲವಷ್ಟೇ. ಅಡಿಕೆ ಮಾರಾಟದಿಂದ ಹಾಗೂ ಕ್ರಷರ್ ನಿಂದ ಬಂದ ಹಣವನ್ನು ಮನೆಯಲ್ಲಿಟ್ಟಿದ್ದೆವು. ಅದನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ : ಬಿಗ್ ರಿಲೀಫ್ : ನಿಟ್ಟುಸಿರು ಬಿಟ್ಟ ಬಿಜೆಪಿ ಶಾಸಕ
ಬಿಜೆಪಿ ನನಗೆ ತಾಯಿ ಇದ್ದಂತೆ
ಸೂಕ್ತ ದಾಖಲೆ ನೀಡಿ ಲೋಕಾಯುಕ್ತರ ವಶದಲ್ಲಿರುವ ನಮ್ಮ ಹಣ ಹಿಂಪಡೆಯುತ್ತೇವೆ ಎಂದು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದ್ದಾರೆ.
ಬಿಜೆಪಿ ನನಗೆ ತಾಯಿ ಇದ್ದಂತೆ, ಪಕ್ಷಕ್ಕೆ ಎಂದೂ ದ್ರೋಹ ಮಾಡಲ್ಲ. ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ ಲಿಮಿಟೆಡ್ ಅಧ್ಯಕ್ಷನಾಗಿ ಕಾನೂನುಬಾಹಿರ ಕೆಲಸ ಮಾಡಿಲ್ಲ. ಸಿಎಂ ಬೊಮ್ಮಾಯಿ ನಿಷ್ಪಕ್ಷಪಾತ ತನಿಖೆ ಮಾಡುವುದಾಗಿ ತಿಳಿಸಿದ್ದು, ಮುಂದಿನ 48 ಗಂಟೆಗಳ ಒಳಗೆ ತನಿಖಾಧಿಕಾರಿಗಳ ಎದುರು ಹಾಜರಾಗಲಿದ್ದೇನೆ ಎಂದು ಹೇಳಿದ್ದಾರೆ.