ಬೆಂಗಳೂರು : ಕೇಂದ್ರ ಸರ್ಕಾರ ಘೋಷಿಸಿರುವಂತೆ ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ನೌಕರರ ಪಟ್ಟಿಗೆ ಬಗ್ಗದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುತಾರಾಂ ಒಲ್ಲೆ ಎಂದಿದ್ದಾರೆ.
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಗೆ ಸಮಾನವಾಗಿ ತುಟ್ಟಿಭತ್ಯೆ ಹೆಚ್ಚಿಸಬೇಕು ಎಂದು ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿಭಟನಾಕಾರರು ನನ್ನ ತಲೆ ಕತ್ತರಿಸಿದರೂ ತುಟ್ಟಿಭತ್ಯೆ ಹೆಚ್ಚಳ ಅಸಾಧ್ಯ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟನೆ ನೀಡಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಮಾತನಾಡಿರುವ ಅವರು, ಕೇಂದ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರಿ ನೌಕರರ ವೇತನ ಸಂರಚನೆಯ ಭಿನ್ನತೆಯನ್ನು ಉಲ್ಲೇಖಿಸಿದ್ದಾರೆ. ಟಿಎಂಸಿ ಸರ್ಕಾರ ರಾಜ್ಯದಲ್ಲಿ ಶೇ.105ರಷ್ಟು ತುಟ್ಟಿಭತ್ಯೆ ನೀಡುತ್ತಿದೆ ಎಂದು ಹೇಳಿದ್ದಾರೆ.
ದಯವಿಟ್ಟು ನನ್ನ ತಲೆ ಕಡಿಯಿರಿ
ನಿಮಗೆ ಎಷ್ಟು ಬೇಕು? ನಿಮಗೆ ತೃಪ್ತಿಯಾಗುವುದು ಯಾವಾಗ? ದಯವಿಟ್ಟು ನನ್ನ ತಲೆ ಕಡಿಯಿರಿ. ಬಹುಶಃ ಆಗ ನಿಮಗೆ ಸಮಾಧಾನವಾಗಬಹುದು. ನೀವು ನನ್ನನ್ನು ಇಷ್ಟಪಡದಿದ್ದಲ್ಲಿ, ನನ್ನ ತಲೆ ಕತ್ತರಿಸಿ. ಆದರೂ, ನನ್ನಿಂದ ಹೆಚ್ಚಿನದನ್ನು ಪಡೆಯಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಆಡಳಿತದ ಉತ್ತರ ಪ್ರದೇಶ ಹಾಗೂ ತ್ರಿಪುರಾದಲ್ಲಿ ತುಟ್ಟಿಭತ್ಯೆ ನೀಡುತ್ತಿಲ್ಲ. ನಿವೃತ್ತ ರಾಜ್ಯ ಸರ್ಕಾರಿ ನೌಕರರಿಗೆ ಪಿಂಚಣಿಯನ್ನು ಪಶ್ಚಿಮ ಬಂಗಾಳದಲ್ಲಿ ಮಾತ್ರ ನೀಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಸಮಾನವಾದ ತುಟ್ಟಿಭತ್ಯೆಗೆ ಆಗ್ರಹ
ರಾಜ್ಯ ಸರ್ಕಾರಿ ನೌಕರರ ಸಂಘಟನೆ, ಸಂಗ್ರಾಮಿ ಜೌತ ಮೋರ್ಚಾ ಸೇರಿದಂತೆ ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರ ಘೋಷಿಸಿರುವ ತುಟ್ಟಿಭತ್ಯೆಗೆ ಸಮಾನವಾದ ತುಟ್ಟಿಭತ್ಯೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ.