ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ತುಮಕೂರಿನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲನೇ ಬಾರಿಗೆ ತುಮಕೂರು ಜಿಲ್ಲೆಗೆ ಖರ್ಗೆ ಆಗಮಿಸಿದ್ದಾರೆ. ಕೊರಟಗೆರೆ ಪಟ್ಟಣದಲ್ಲಿ ರಾಜೀವ್ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ.
ಸಂಸತ್ ಕಲಾಪದಲ್ಲಿ ಕೇಳುವ ಯಾವುದೇ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡುವುದಿಲ್ಲ. ನನ್ನ 52 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಪ್ರಧಾನಿಯನ್ನು ನೋಡಿಯೇ ಇಲ್ಲ ಎಂದು ಲೇವಡಿ ಮಾಡಿದ್ದಾರೆ.
ಮೋದಿ ಅವರನ್ನು ದೇಶದ ಅಭಿವೃದ್ಧಿ ಮಾಡಲಿ ಎಂದು ಆಯ್ಕೆ ಮಾಡಿದರು. ಆದರೆ ಮೋದಿ ಅವರು ಕಾಂಗ್ರೆಸ್ ಅನ್ನು ಟೀಕಿಸುವುದರಲ್ಲ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟ ಸಿದ್ದು-ಡಿಕೆಶಿಗೆ ‘ಪರಂ’ ಪಂಚ್..!
ಬಿಜೆಪಿ ಹೆದರಿಸಿ ಚುನಾವಣೆ ಗೆಲ್ಲುತ್ತದೆ
ಸರ್ಕಾರದ ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ದಳ ಅಧಿಕಾರಿಗಳಿಂದ ಕಾಂಗ್ರೆಸ್ ನಾಯಕರನ್ನು ಹೆದರಿಸಿ ಬಿಜೆಪಿ ಪಕ್ಷ ಚುನಾವಣೆ ಗೆಲ್ಲುತ್ತದೆ. ಸಕ್ಕರೆ ಕಾರ್ಖಾನೆ ಮತ್ತು ಸಹಕಾರ ಸಂಘದ ಮಾಲಿಕರಿಗೆ ಅಮಿತ್ ಶಾ ಧಮಕಿ ಹಾಕಿದ್ದಾರೆ ಎಂದು ಟೀಕಿಸಿದ್ದಾರೆ.
ಕಪ್ಪುಹಣ ಎಲ್ಲಿಂದ ಬರುತ್ತಿದೆ
ದೇಶದಲ್ಲಿ 30 ಲಕ್ಷ ಮತ್ತು ಕರ್ನಾಟಕದಲ್ಲಿ 3 ಲಕ್ಷ ಹುದ್ದೆಗಳು ಖಾಲಿ ಇದೆ. ಇದರ ಬಗ್ಗೆ ಪ್ರಧಾನಿ ಮೋದಿ ಚಕಾರ ಎತ್ತುವುದಿಲ್ಲ. ಅಷ್ಟೇ ಅಲ್ಲ ಕಪ್ಪುಹಣ ಎಲ್ಲಿಂದ ಬರುತ್ತಿದೆ ಎಂಬುದೇ ಮೋದಿಗೆ ಗೊತ್ತಿಲ್ಲ. ಮೋದಿ ಜನರಿಗೆ ನೀಡಿದ ಭರವಸೆ ಹುಸಿಯಾಗಿದೆ. ಬ್ರಿಟಿಷರಿಗೆ ಹೆದರದ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಹೆದರುತ್ತಾ ಎಂದು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಶೇ.40ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ. ಭ್ರಷ್ಟಾಚಾರದ ಸಾಕ್ಷಿ ಕೇಳಿದ ಮುಖ್ಯಮಂತ್ರಿಗೆ ಲೋಕಾಯುಕ್ತ ಆಧಾರ ಸಮೇತ ಸಾಕ್ಷಿ ನೀಡಿದೆ. ಈಗಲಾದರೂ ಮುಖ್ಯಮಂತ್ರಿ ರಾಜಿನಾಮೆ ನೀಡಬೇಕಿದೆ ಎಂದು ಒತ್ತಾಯಿಸಿದ್ದಾರೆ.