ಬೆಂಗಳೂರು : ಅರಮನೆ ನಗರಿ ಜನತೆಗೆ ಇದು ಗುಡ್ ನ್ಯೂಸ್. ಮೈಸೂರು ನಗರ ಪಾಲಿಕೆ ಇನ್ನುಮುಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಂತೆ ಬೃಹತ್ ಸದ್ಯದಲ್ಲೇ ಬೃಹತ್ ಮೈಸೂರು ಮಹಾನಗರ ಪಾಲಿಕೆ ಆಗಲಿದೆ.
ಹೌದು, ಮೈಸೂರು ನಗರದ ಸುತ್ತಮುತ್ತಲಿನ ಕೆಲವು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಯನ್ನು ಸೇರಿಸಿ ಮೈಸೂರು ಮಹಾನಗರ ಪಾಲಿಕೆಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಸಂಬಂಧ ನಗರಪಾಲಿಕೆ ಪ್ರಸ್ತಾವನೆ ಸಿದ್ಧಪಡಿಸಿದೆ.
ಗ್ರೇಟರ್ ಮೈಸೂರು ರಚನೆ
ಸಿಲಿಕಾನ್ ಸಿಟಿ ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ಬೃಹತ್ ಮಹಾನಗರ ಪಾಲಿಕೆಯಾಗಿ ರೂಪುಗೊಂಡರೆ ಅಭಿವೃದ್ಧಿಗೂ ವೇಗ ಸಿಗಲಿದೆ. ಗ್ರೇಟರ್ ಮೈಸೂರು ರಚನೆ ಸಂಬಂಧ ಈಗಾಗಲೇ ನಕ್ಷೆ ಹಾಗೂ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಪಡೆದು ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ ಎನ್ನಲಾಗಿದೆ.
1862ರಲ್ಲಿ ಟೌನ್ ಮುನ್ಸಿಪಾಲಿಟಿ ರಚನೆ ಆಯಿತು. ಆಗ ಇದ್ದ ಜನಸಂಖ್ಯೆ30 ಸಾವಿರ. 1977ರಲ್ಲಿ ಟೌನ್ ಮುನ್ಸಿಪಾಲಿಟಿ ನಗರಪಾಲಿಕೆಯಾಗಿ ಪರಿವರ್ತನೆಗೊಂಡಿತು. ಪ್ರಾರಂಭದಲ್ಲಿ 57 ವಾರ್ಡ್‌ಗಳಿದ್ದವು. 1995ರಲ್ಲಿಈ ಸಂಖ್ಯೆ 65ಕ್ಕೆ ಏರಿಕೆ ಆಯಿತು. ಇದಾಗಿ 27 ವರ್ಷಗಳೇ ಕಳೆದಿದ್ದು, ಮೈಸೂರು ನಗರ ಸಾಕಷ್ಟು ಬೆಳೆದಿದೆ. 2008ರಲ್ಲಿ ಬಿಜೆಪಿ ಸರಕಾರವಿದ್ದಾಗ ಗ್ರೇಟರ್ ಮೈಸೂರು ರಚನೆಯಾಗಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು.
15 ವರ್ಷದ ಈ ಕನಸಿಗೆ ರೆಕ್ಕೆ
ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಇದಕ್ಕಾಗಿ ಯೋಜನೆ ಕೂಡ ಸಿದ್ಧಪಡಿಸಿದ್ದರು. ಆದರೆ, ಟೇಕಾಫ್ ಆಗಲಿಲ್ಲ. ನಂತರ ಬಜೆಟ್ ಸಂದರ್ಭ ಮಾತ್ರ ಈ ವಿಷಯ ಚರ್ಚೆಗೆ ಬರುತ್ತಿತ್ತು. ಇದೀಗ ಸಂಸದ ಪ್ರತಾಪ್ ಸಿಂಹ 15 ವರ್ಷದ ಈ ಕನಸಿಗೆ ರೆಕ್ಕೆ ಕಟ್ಟಲು ಮುಂದಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಶಾಸಕರು, ಸಂಸದರ ಸಭೆ ನಡೆಸಿ, ಗ್ರೇಟರ್ ಮೈಸೂರು ಕುರಿತು ಅಭಿಪ್ರಾಯ ಪಡೆಯಲಾಗಿದ್ದು, ಎಲ್ಲರೂ ಗ್ರೇಟರ್ ಮೈಸೂರು ಕುರಿತು ಒಲವು ವ್ಯಕ್ತಪಡಿಸಿದ್ದಾರೆ.
ಗ್ರೇಟರ್ ಮೈಸೂರು ರಚನೆಯಾದರೆ ಹೂಟಗಳ್ಳಿ ನಗರಸಭೆ, ಬೋಗಾದಿ, ಕಡಕೊಳ, ಶ್ರೀರಾಂಪುರ ಮತ್ತು ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ, ಹಾಲನಹಳ್ಳಿ, ಚಾಮುಂಡಿಬೆಟ್ಟ, ಇಲವಾಲ ಮತ್ತು ಸಿದ್ದಲಿಂಗಪುರ ಗ್ರಾಮ ಪಂಚಾಯಿತಿಗಳು ಪಾಲಿಕೆ ವ್ಯಾಪ್ತಿಗೆ ಒಳಪಡಲಿವೆ.
ಗ್ರೇಟರ್ ಮೈಸೂರು ಕಾರ್ಯರೂಪಕ್ಕೆ ಬಂದರೆ ನಗರ ಪಾಲಿಕೆಗೆ ಹೆಚ್ಚುವರಿಯಾಗಿ 1.51 ಲಕ್ಷ ಜನಸಂಖ್ಯೆ ಸೇರ್ಪಡೆಯಾಗಲಿದ್ದು, 25.81 ಕೋಟಿ ರೂ. ಆದಾಯ ಹರಿದು ಬರಲಿದೆ.