ಬೆಂಗಳೂರು : ರಾಜ್ಯ ಸರ್ಕಾರ ಅಂಗನವಾಡಿ ಮಕ್ಕಳು, ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮಾಡಿದೆ. ಆದ್ರೆ, ಕಾಲೇಜು ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಕ್ಕಿರಲಿಲ್ಲ. ಇದೀಗ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಕೇವಲ 5 ರೂ.ಗೆ ಮಧ್ಯಾಹ್ನದ ಊಟ ನೀಡುವ ಕಾರ್ಯ ನಾಳೆಕ್ಕೆ ನಾಳೆ ಚಾಲನೆ ಸಿಗಲಿದೆ.
ಹೌದು, ಇಂಥದೊಂದು ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಕಲ್ಪತರು ನಾಡು ಸಾಕ್ಷಿಯಾಗಲಿದೆ. ತುಮಕೂರು ವಿಶ್ವವಿದ್ಯಾನಿಯದಲ್ಲಿ ಆರ್ಥಿಕವಾಗಿ ಹಿಂದುಳಿದ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ 5 ರೂ.ಗೆ ಮಧ್ಯಾಹ್ನದ ಊಟ ವಿತರಿಸುವ ಕಾರ್ಯಕ್ಕೆ ನಾಳೆ (ಮಾರ್ಚ್ 6ರಂದು) ಅಧಿಕೃತವಾಗಿ ಚಾಲನೆ ಸಿಗಲಿದೆ.
ಮೈಸೂರು ಒಡೆಯರ್ ಚಾಲನೆ
ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಭಾಗವಹಿಸಲಿದ್ದಾರೆ.
ಇಡೀ ರಾಷ್ಟ್ರದಲ್ಲಿಯೇ ಮೊದಲ ಪ್ರಯತ್ನ
ಈ ಸಂಬಂಧ ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದ ಸ್ವಾಮೀಜಿ ಮಾಹಿತಿ ನೀಡಿದ್ದಾರೆ. ಪಾವಗಡ ರಾಮಕೃಷ್ಣ ಸೇವಾಶ್ರಮ ಮತ್ತು ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿ ವತಿಯಿಂದ ಆದರ್ಶ ನಗರದ ಶಿರಡಿ ಸಾಯಿ ಮಂದಿರದ ಸಹಕಾರದೊಂದಿಗೆ ಊಟ ವಿತರಣೆ ಮಾಡಲಾಗುತ್ತದೆ. ಹಳ್ಳಿಯ ಮಕ್ಕಳ ಹಸಿವು ನೀಗಿಸಲು ಈ ಕೆಲಸ ಆರಂಭವಾಗಲಿದೆ. ವಿಶ್ವವಿದ್ಯಾನಿಲಯದಲ್ಲಿ ಮಧ್ಯಾಹ್ನದ ಊಟ ನೀಡುತ್ತಿರುವುದು ಇಡೀ ರಾಷ್ಟ್ರದಲ್ಲಿಯೇ ಮೊದಲ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.
1,500 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ
ತುಮಕೂರು ವಿಶ್ವವಿದ್ಯಾನಿಲಯದ ಸುಮಾರು 1,500 ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗಿದೆ. ಶಿರಡಿ ಸಾಯಿ ಮಂದಿರದಲ್ಲಿ ಊಟ ತಯಾರಿಸಿ, ವಿ.ವಿಗೆ ತರಲಾಗುತ್ತದೆ. ಭಟ್ಟರ ನೇಮಕ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ವಿ.ವಿ ಆವರಣದಲ್ಲಿಯೇ ಆಧುನಿಕ ತಂತ್ರಜ್ಞಾನದ ಸೌಲಭ್ಯವುಳ್ಳ ಅಡುಗೆ ಕೋಣೆ ನಿರ್ಮಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.