Wednesday, January 22, 2025

H3N2 ಭಯ ಬೇಡ, ಈ ಮುಂಜಾಗ್ರತಾ ಕ್ರಮ ಪಾಲಿಸಿದರೆ ಸಾಕು!

ಬೆಂಗಳೂರು : ಕೋವಿಡ್.. ಅಬ್ಬಬ್ಬಾ ಈ ಮಹಾಮಾರಿ ಹೆಸರು ಕೇಳಿದ್ರೆ ಯಾರಿಗೆ ತಾನೇ ಭಯವಿಲ್ಲ ಹೇಳಿ. ಮೊದಲೆರಡು ಅಲೆಯಲ್ಲಿ ಸಹಸ್ರಾರು ಜನರ ಜೀವನ ಹಾಗೂ ಜೀವವನ್ನೇ ಕಸಿದಿತ್ತು ಈ ಮಹಾಮಾರಿ. ಇದೀಗ ಮತ್ತೆ ಕೋವಿಡ್ ರೂಪಾಂತರಿ ವೈರಸ್ ನ ಭೀತಿ ಶುರುವಾಗಿದೆ. ಅಂದ ಮಾತ್ರಕ್ಕೆ ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ.

ಯೆಸ್.. ಕೋವಿಡ್ ವೈರಸ್ ನಿಂದಾಗಿ ಜನರು ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಅಪಾರ ಸಾವು – ನೋವುಗಳು ಸಂಭವಿಸಿದೆ. ಈ ನಡುವೆ ಕೋವಿಡ್ ಗೆ ಎದೆಯೊಡ್ಡಿ ಮತ್ತೆ ಜೀವನವನ್ನು ಕಟ್ಟಿಕೊಂಡಿದ್ದಾರೆ. ಸದ್ಯಕ್ಕೆ ಕೊವಿಡ್ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೂ, ಕೊರೊನಾ ಭೀತಿ ರಾಜ್ಯದಲ್ಲಿ ಮನೆಮಾಡಿದೆ. ಇದರ ಬೆನ್ನಲ್ಲೇ ದೇಶದಲ್ಲಿ ಮತ್ತೊಂದು ರೂಪಾಂತರಿ ವೈರಸ್ ಕಾಟ ಶುರುವಾಗಿದೆ.

ಸಾವಿರಾರು ಜನರು ಹೊಸ ರೂಪಾಂತರಿ ವೈರಸ್ H3N2ಗೆ ತುತ್ತಾಗಿದ್ದಾರೆ.  ವೈರಸ್ ಕಾಣಿಸಿಕೊಂಡ ರೋಗಿಗಳಲ್ಲಿ ಜ್ವರ, ಉಸಿರಾಟದ ಸಮಸ್ಯೆ, ನೆಗಡಿ, ವಾಕರಿಕೆ, ಮೈ-ಕೈ ನೋವು, ಸ್ನಾಯು ಸೆಳೆತ,  ಅತಿಸಾರ ಲಕ್ಷಣಗಳು ಕಾಣಿಸಿಕೊಂಡಿವೆ. ಕೊರೊನಾ ಸೋಂಕಿನ ಲಕ್ಷಣಗಳನ್ನೇ ಹೊಂದಿದ್ದರೂ, ಕೋವಿಡ್ ಮಹಾಮಾರಿಯಷ್ಟು ಅಪಾಯಕಾರಿಯಲ್ಲ. ನಾವು ಹೇಳುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೆ ಅಥವಾ ಕ್ರಮಗಳನ್ನು ತೆಗೆದುಕೊಂಡರೆ ಈ ರೂಪಾಂತರಿ ಸೋಂಕು ಬರದಂತೆ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.

ಇಲ್ಲಿವೆ ಸೋಂಕು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳು

* ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಬೇಕು (ಶುಚಿಗೊಳಿಸಬೇಕು)

* ಹೊರಗಡೆ ಓಡಾಡುವವರು ಮಾಸ್ಕ್ ಧರಿಸುವುದು ಸೂಕ್ತ

* ಸಾರ್ವಜನಿಕ ಸ್ಥಳ ಹಾಗೂ ಹೆಚ್ಚು ಜನಸಂದಣಿ ಸ್ಥಳಗಳಿಂದ ಅಂತರ ಕಾಯ್ದುಕೊಳ್ಳುವುದು

* ಮೂಗು, ಬಾಯಿಯನ್ನು ಆಗಾಗ ಮುಟ್ಟಿಕೊಳ್ಳದಿರುವುದು

* ಕೆಮ್ಮು ಹಾಗೂ ಸೀನುವಾಗ ಮೂಗು, ಬಾಯಿ ಮುಚ್ಚಿಕೊಳ್ಳುವುದು

* ದೇಹದಲ್ಲಿ ನೀರಿನಾಂಶ ಹೆಚ್ಚಿರುವಂತೆ ನೋಡಿಕೊಳ್ಳುವುದು

* ವೈದ್ಯರ ಭೇಟಿ ನಂತರವೇ ಅವರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳುವುದು

* ಸಾರ್ವಜನಿಕ ಸಾರಿಗೆಗಳಾದ ಬಸ್, ಮೊಟ್ರೋ ಹಾಗೂ ಮಾಲ್ ಗಳಲ್ಲಿ ಓಡಾಡುವಾಗ ಎಚ್ಚರವಹಿಸುವುದು.

* ಆದಷ್ಟು ಕಾಯಿಸಿ ಆರಿಸಿದ (ಬೆಚ್ಚಗಿನ) ನೀರನ್ನು ಕುಡಿಯುವುದು.

ಒಟ್ನಲ್ಲಿ, ದೇಶದಲ್ಲಿ ಇದೀಗ ಕಾಣಿಸಿಕೊಂಡಿರುವ ರೂಪಾಂತರಿ ವೈರಸ್ ಕೋವಿಡ್ ನಷ್ಟು ಭಯಪಡಿಸುವಷ್ಟಿಲ್ಲವಾದರೂ, ಆರೋಗ್ಯ ರಕ್ಷಣೆಗಾಗಿ ಮುಂಜಾಗ್ರತೆ ವಹಿಸುವುದು ಉತ್ತಮ. ಹೊಸ ಸೋಂಕು ಲಕ್ಷಣಗಳು ಕಾಣಿಸಿಕೊಂಡಲ್ಲಿ ಮನೆಯಲ್ಲಿಯೇ ಸ್ವಯಂ ಚಿಕಿತ್ಸೆ ತೆಗೆದುಕೊಳ್ಳುವುದಕ್ಕಿಂತ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಇದರ ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಮನೆಯಲ್ಲಿ ಶುಚಿತ್ವ ಕಾಪಾಡಿಕೊಂಡರೆ ಯಾವುದೇ ಸೋಂಕು ಉಲ್ಭಣಗೊಂಡರೂ ಜಯಿಸಬಹುದು.

ಸಾಹಿತ್ಯ, ಪವರ್​ ಟಿವಿ

RELATED ARTICLES

Related Articles

TRENDING ARTICLES