ಬೆಂಗಳೂರು : ಜೆಡಿಎಸ್ ಪಕ್ಷದ ಮಹತ್ವಕಾಂಕ್ಷೆಯ ಪಂಚರತ್ನ ರಥೆಯಾತ್ರೆ ಮುಕ್ತಾಯಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ತಿಂಗಳ 26ರಂದು ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ.
ಇದು ನನ್ನ ರಾಜಕೀಯ ಜೀವನದ ಇತಿಹಾಸದಲ್ಲಿಯೇ ಮಹೋನ್ನತ ಸಮಾವೇಶ ಆಗಲಿದೆ. ಈವರೆಗೂ ಯಾರೂ ಮಾಡಿರದಂಥ ಸಮಾವೇಶ ಅದಾಗಿರುತ್ತದೆ. ಅರಮನೆ ನಗರಿ ಮೈಸೂರಿನಲ್ಲಿ ಸಮಾರೋಪ ನಡೆಯಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
100 ಕೀ.ಮೀ. ಬೃಹತ್ ರೋಡ್ ಶೋ
ಕುಂಬಳಗೋಡಿನಿಂದ ಪ್ರಾರಂಭವಾಗಿ ಮೈಸೂರಿನವರೆಗೆ ಸುಮಾರು 100 ಕೀ.ಮೀ ದೂರ ಬೃಹತ್ ರೋಡ್ ಶೋ ಮಾಡಲಾಗುವುದು. ಆ ರೋಡ್ ಶೋ ದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ತೆರೆದ ವಾಹನದಲ್ಲಿ ಕರೆದುಕೊಂಡು ಹೋಗಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿಜೆಪಿ ಸ್ಪೀಡ್ ಗೆ ನಾನು ಬ್ರೇಕ್ ಹಾಕುತ್ತಿದ್ದೇನೆಯೇ ಹೊರತು ಕಾಂಗ್ರೆಸ್ ಅಲ್ಲ : ಎಚ್.ಡಿ ಕುಮಾರಸ್ವಾಮಿ
ಸಮಾರೋಪದಲ್ಲಿ ಹತ್ತು ಲಕ್ಷ ಜನ
ಮೈಸೂರಿನಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಹತ್ತು ಲಕ್ಷ ಜನ ಸೇರಲಿದ್ದಾರೆ. ಇದೊಂದು ಐತಿಹಾಸಿಕ ಸಮಾವೇಶ ಆಗಲಿದೆ. ಈ ಸಮಾವೇಶದ ಮೂಲಕ ರಾಜ್ಯದ ಜನರಿಗೆ ನಮ್ಮ ಮುಂದಿನ ಉದ್ದೇಶ ಹಾಗೂ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ನೀಡಿದವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡರು, ಕೆ.ಎನ್.ತಿಪ್ಪೇಸ್ವಾಮಿ, ಮಾಜಿ ಸದಸ್ಯ ಎಚ್.ಎಂ.ರಮೇಶ್ ಗೌಡ, ಮಾಜಿ ಶಾಸಕ ಸುರೇಶ್ ಬಾಬು ಉಪಸ್ಥಿತರಿದ್ದರು.