ಬೆಂಗಳೂರು: ಹಾಸನ ಜೆಡಿಎಸ್ ಟಿಕೆಟ್ ಫೈಟ್ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಆ ಮೂಲಕ ಟಿಕೆಟ್ ಗೊಂದಲಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
ಹಾಸನದ ಜಿಲ್ಲೆಯ ರಾಜಕಾರಣಕ್ಕೆ ನಾನು ಬಂದಿಲ್ಲ. ಅದನ್ನು ರೇವಣ್ಣ ಅವರಿಗೇ ನಾನು ಬಿಟ್ಟಿದ್ದೇನೆ. ಪಕ್ಷಕ್ಕೆ ದುಡಿದವರನ್ನು ನಾನು ಎಂದೂ ಕೈ ಬಿಟ್ಟಿಲ್ಲ. ತಾಳ್ಮೆ ಅನ್ನೋದು ಇಲ್ಲಿ ಮುಖ್ಯ. ಬೇಗ ಮತ್ತೊಂದು ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದೇ ತಿಂಗಳು ಎರಡನೇ ಪಟ್ಟಿ
ಎರಡನೇ ಪಟ್ಟಿ ಇನ್ನೇನು ಅಂತಿಮ ಹಂತದಲ್ಲಿದೆ. ಆ ಪಟ್ಟಿಯಲ್ಲಿ 60ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರುಗಳು ಇರುತ್ತವೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ. ಈ ತಿಂಗಳ 11 ಅಥವಾ 14ರಂದು ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಲೂಟಿ ಮಾಡಿದ ಹಣದಲ್ಲಿ ಚುನಾವಣೆ
ಬಿಜೆಪಿ ಶಾಸಕರ ಮಗನ ಕಚೇರಿ, ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಟೆಂಡರ್ ಹಣ ವಸೂಲಿಗೆ ಮಗನ ಮೀಡಿಯೇಟರ್ ಮಾಡಿದ್ದಾರೆ. 40 ಲಕ್ಷ ಹಿಡಿಯಲಿಕ್ಕೆ ಹೋಗಿ ಎಂಟು ಕೋಟಿ ಹೊರಗೆ ಬಂದಿದೆ. 40 ಪರ್ಸೆಂಟ್ ಅನ್ನೋದರ ಅಳ ಅಗಲ ಗೊತ್ತಾಗ್ತಾ ಇದೆ ಈಗ. ಒಬ್ಬೊಬ್ಬ ಬಿಜೆಪಿ ಶಾಸಕ 40ರಿಂದ 50 ಕೋಟಿ ಕ್ಯಾಷ್ ಇಟ್ಟುಕೊಂಡಿದ್ದಾರೆ. ಪಾಪದ ಹಣ ಇದು, ಲೂಟಿ ಮಾಡಿದ ಈ ಹಣದಲ್ಲಿ ಚುನಾವಣೆ ಗೆಲ್ಲೋದಿಕ್ಕೆ ಹೊರಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಇದೇ ವೇಳೆ ಕಡೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿ.ಎಂ ಧನಂಜಯ ಹಾಗೂ ಕೊಳ್ಳೇಗಾಲ ಕ್ಷೇತ್ರದ ಪೊಲೀಸ್ ಇಲಾಖೆಯಿಂದ ಸ್ವಯಂ ನಿವೃತ್ತ ಸರ್ಕಲ್ ಇನ್ಸಸ್ಪೆಕ್ಟರ್ ಪುಟ್ಟಸ್ವಾಮಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡರು, ಕೆ.ಎನ್.ತಿಪ್ಪೇಸ್ವಾಮಿ, ಮಾಜಿ ಸದಸ್ಯ ಎಚ್.ಎಂ.ರಮೇಶ್ ಗೌಡ, ಮಾಜಿ ಶಾಸಕ ಸುರೇಶ್ ಬಾಬು ಉಪಸ್ಥಿತರಿದ್ದರು.