ಬೆಂಗಳೂರು : ಮಹಿಳೆಯರ ರಕ್ಷಣೆ ನಮ್ಮ ಮೊದಲ ಆದ್ಯತೆ. ಹೀಗಾಗಿ, ಈ ಬಾರಿಯ ಬಜೆಟ್ ನಲ್ಲಿ 6 ಮಹಿಳಾ ಪೊಲೀಸ್ ಠಾಣೆ ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು ಸುರಕ್ಷಿತ ನಗರ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಅವರು, ಸಂಚಾರ ದಟ್ಟಣೆ ಕಡಿಮೆ ಮಾಡಲು 4 ಹೊಸ ಪೊಲೀಸ್ ಠಾಣೆ ನೀಡಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ 9 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆ, 5 ಸಂಚಾರ ಪೋಲಿಸ್ ಠಾಣೆ ಮತ್ತು 6 ಮಹಿಳಾ ಪೊಲೀಸ್ ಠಾಣೆ ಮಂಜೂರು ಮಾಡಲಾಗಿದೆ ಎಂದು ಹೇಳಿದ್ದಾರೆ.
ಮಹಿಳೆಯರು ಶಾಲೆ-ಉದ್ಯೋಗಕ್ಕೆ ಹೋಗಬೇಕು
ದೇಶದ 130 ಕೋಟಿ ಜನ ಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ಎಲ್ಲರಿಗೂ ಬದುಕಿನಲ್ಲಿ ಮುಂದುಬರೆಬೇಕೆನ್ನುವ ಉತ್ಸಾಹವಿದ್ದು, ಮಹಿಳೆಯರಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ಇದೆ. ಅವರೂ ಶಾಲೆಗೆ ಹಾಗೂ ಉದ್ಯೋಗಕ್ಕೆ ಹೋಗಬೇಕು ಎಂದು ತಿಳಿಸಿದ್ದಾರೆ.
ಹಲವಾರು ಸಂದರ್ಭಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಆಗುತ್ತಿದೆ. ಇದನ್ನು ತಡೆಯಲು ಹಲವಾರು ಉಪಾಯಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡಿದೆ ನಿರ್ಭಯ ಪ್ರಕರಣದ ನಂತರ ಕಾನೂನು ತರಲಾಗಿದೆ. ಕಾನೂನಿಗೆ ಬಳ ತುಂಬಲು ಕಾನೂನಿನ ವ್ಯವಸ್ಥೆಯ ನಿರ್ವಹಣೆ ಅಗತ್ಯ. ವ್ಯಾಪಕವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಒದಗಿಸುವುದು ಸವಾಲು ಎಂದಿದ್ದಾರೆ.
ಗೃಹ ಸಚಿವರ ಬೆಂಬಲ
ಕೇಂದ್ರ ಗೃಹ ಸಚಿವರ ಬೆಂಬಲದಿಂದ ರಾಜ್ಯದಲ್ಲಿ ಮಹಿಳೆಯರ ರಕ್ಷತೆ ಸಾಧ್ಯವಾಗಿದೆ. ಗುಜರಾತಿನ ನಂತರ ಎಫ್.ಎಸ್.ಎಲ್ ವಿಶ್ವವಿದ್ಯಾಲಯವನ್ನು ಕರ್ನಾಟಕಕ್ಕೆ ನೀಡಿದ್ದಾರೆ. ಎಫ್.ಎಸ್.ಎಲ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪರಾಧ ನಿಯಂತ್ರಣ, ಪಿ.ಎಫ್.ಐ ರದ್ದತಿ, ಭಯೋತ್ಪಾದನೆ ಚಟುವಟಿಕೆ ಯನ್ನು ನಿರ್ಮೂಲನೆ ಮಾಡುವ ಸಲುವಾಗಿ ಅವರು ಸಹಾಯ ಮಾಡುತ್ತಿದ್ದಾರೆ. ಮಾದಕ ವಸ್ತು ಗಳ ನಿಯಂತ್ರಣಕ್ಕೆ ಕಠಿಣ ಕ್ರಮ ವಹಿಸಿದೆ ಎಂದು ತಿಳಿಸಿದ್ದಾರೆ.
ನಮ್ಮ ಪೊಲಿಸರ ಮೇಲಿನ ನಂಬಿಕೆ
ರಾಜ್ಯದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ. ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡುವ ಪರಿಸ್ಥಿತಿ ಇರಬೇಕು. ನಮ್ಮ ಪೊಲಿಸರ ಮೇಲಿನ ನಂಬಿಕೆಯಿಂದ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗದೆ. ಮಹಿಳೆಯರು ಪುರುಷರು ಸಮಾನವಾಗಿ ಕೆಲಸ ಮಾಡುವ ವ್ಯವಸ್ಥೆಯಾಗಬೇಕು ಎನ್ನುವ ಕಾರಣಕ್ಕೆ ಮಹಿಳೆಯರಿಗೆ ರಾತ್ರಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.