Wednesday, January 22, 2025

ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ನಂ.1 ಆಗಲಿದೆ : ಜೆ.ಪಿ ನಡ್ಡಾ

ಚಾಮರಾಜನಗರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕ ನಂ.1 ಆಗಲಿದೆ. ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ಹೆಲಿಕಾಪ್ಟರ್ ನಿರ್ಮಾಣವಾಗಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ನಂತರ ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡಿ ಅವರು ಸೋಲಿಗ ಜನಾಂಗದವರ ಸಂವಾದ ಸಭೆಯನ್ನುದ್ದೇಶಿಸಿ ಭಾಷಣ ಮಾತನಾಡಿದ್ದಾರೆ.

ಮಲೆ ಮಹದೇಶ್ವರಸ್ವಾಮಿ ಆಶೀರ್ವಾದ ಪಡೆದು ವಿಜಯ ಸಂಕಲ್ಪ ಯಾತ್ರೆ ಆರಂಭಿಸಲಾಗಿದೆ. ಯಾತ್ರೆಗೆ ಯಾವುದೇ ವಿಘ್ನ ಬರುವುದಿಲ್ಲ. ಯಾತ್ರೆಯು ರಾಜ್ಯದ 224 ಕ್ಷೇತ್ರಗಳಲ್ಲಿಯೂ ಸಮಚರಿಸಲಿದೆ. 150ಕ್ಕೂ ಹೆಚ್ಚು ರೋಡ್ ಷೋ, ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದೇವೆ. ಬೆಳಗಾವಿಯಲ್ಲಿ ಸಚಿವ ರಾಜನಾಥ ಸಿಂಗ್ ಅವರು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮತಬ್ಯಾಂಕ್, ಜಾತಿವಾದ, ಭ್ರಷ್ಟಾಚಾರದ ರಾಜನೀತಿ ಕಾಂಗ್ರೆಸ್‍ನದಾಗಿತ್ತು. ಆದರೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸದೊಂದಿಗೆ ಮೋದಿಜಿ ಅವರು ಸರಕಾರವನ್ನು ಮುನ್ನಡೆಸುತ್ತಿದ್ದು, ದೇಶವು 5ನೇ ಬೃಹತ್ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಹಿಂದೆ ಅದು 10ನೇ ಸ್ಥಾನದಲ್ಲಿತ್ತು ಎಂದು ವಿವರಿಸಿದರು. ಮೊಬೈಲ್ ಉತ್ಪಾದನೆ, ಕೈಗಾರಿಕೆ ಸೇರಿ ಭಾರತದ ಪ್ರಗತಿ ಅತ್ಯದ್ಭುತ ಎಂದು ತಿಳಿಸಿದ್ದಾರೆ.

ವಂಚಿತರು, ಶೋಷಿತರು, ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಎಲ್ಲ ವರ್ಗದವರಿಗೆ ಸೌಲಭ್ಯಗಳನ್ನು ನೀಡಲು ನಮ್ಮ ಪಕ್ಷ ಶ್ರಮಿಸುತ್ತಿದೆ. ಇದಕ್ಕೆ ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇ ಸಾಕ್ಷಿ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಗಮನಿಸಿ ಜನತೆ ಬಿಜೆಪಿಯನ್ನು ಬೆಂಬಲಿಸುವುದು ಖಚಿತ. ಸಂವಾದದ ಹಿನ್ನೆಲೆಯಲ್ಲಿ ಇಲ್ಲಿನ ಚಿತ್ರಣವನ್ನೇ ಬದಲಿಸಲು ನಾವು ಬದ್ಧತೆ ಪ್ರದರ್ಶಿಸುತ್ತೇವೆ ಎಂದು ಜೆ.ಪಿ ನಡ್ಡಾ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES