Sunday, November 17, 2024

ಸಿಎಂ ಆದೇಶಕ್ಕೆ ಬಗ್ಗದ ನೌಕರರು, ಮುಷ್ಕರ ಮುಂದುವರಿಸಲು ನಿರ್ಧಾರ

ಬೆಂಗಳೂರು: ಏಳನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೇ.17ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಇದಕ್ಕೆ ಬಗ್ಗದ ನೌಕರರು ಮುಷ್ಕರ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ.

ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳ ಶಿಕ್ಷಕರು ಮತ್ತು ಅಧ್ಯಾಪಕರು ಸಹ ತರಗತಿಗೆ ಹೋಗದೆ ಮನೆಯಲ್ಲೇ ಉಳಿಯುವ ಮೂಲಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಶಾಲಾ-ಕಾಲೇಜುಗಳಿಗೆ ರಜೆ ಇದೆಯೋ ಇಲ್ಲವೋ ಎಂಬುದು ಗೊಂದಲಕ್ಕೆ ಒಳಗಾಗಿರುವ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳ ಬಳಿ ತೆರಳಿ ಮನೆಗಳಿಗೆ ಹಿಂತಿರುಗಿದ್ದಾರೆ.

ಸರ್ಕಾರಿ ಕಚೇರಿಗಳು ಖಾಲಿ ಖಾಲಿ
ಸರ್ಕಾರಿ ಆಸ್ಪತ್ರೆ, ಕಂದಾಯ, ಕೃಷಿ, ಗ್ರಾಮೀಣಾಭಿವೃದ್ಧಿ, ಮಿನಿವಿಧಾನಸೌಧ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವವರು ಸಹ ಸರ್ಕಾರಿ ನೌಕರರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಚೇರಿಗಳಲ್ಲಿ ಬೆರಳೆಣಿಕೆಯ ಸಿಬ್ಬಂದಿ ಕಂಡು ಬಂದಿದ್ದಾರೆ ಎಂದು ತಿಳಿದುಬಂದಿದೆ.

ಎರಡ್ಮೂರು ಗಂಟೆಗಳಲ್ಲಿ ತೀರ್ಮಾನ
ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸದಿದ್ದರೆ ಮುಷ್ಕರ ಮುಂದುವರೆಯಲಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ಇನ್ನು ಎರಡು ಮೂರು ಗಂಟೆಗಳಲ್ಲಿ ಸರ್ಕಾರದ ತೀರ್ಮಾನ ಹೊರಬೀಳಲಿದೆ ಎಂಬ ವಿಶ್ವಾಸ ನಮಗೆ ಇದೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸರ್ಕಾರಿ ನೌಕರರ ಬೇಡಿಕೆ ಏನು?
ಏಳನೇ ವೇತನ ಆಯೋಗದ ವರದಿ ಜಾರಿ, ಹಳೆಯ ಪಿಂಚಣಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ನೌಕರರು ಕಚೇರಿಗೆ ಹೋಗದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಅವರ ಬೇಡಿಕೆ ಈಡೇರಿಸುವ ಭರವಸೆ ನೀಡುತ್ತಿದೆಯೇ ಹೊರತು ಈವರೆಗೆ ಸ್ಪಷ್ಟ ನಿರ್ಧಾರ ತಿಳಿಸಿಲ್ಲ.

RELATED ARTICLES

Related Articles

TRENDING ARTICLES