ಚಿಕ್ಕಮಗಳೂರು : ಆಕೆ ಕಾರಾಗೃಹದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಪೊಲೀಸ್ ಪೇದೆ. ಇದೀಗ ಆಕೆ ತುಂಬು ಗರ್ಭಿಣಿ. ಹೀಗಾಗಿ, ತವರಿಗೆ ಹೊರಟ ತಮ್ಮ ಸಹೋದ್ಯೋಗಿಯನ್ನು ಇಲ್ಲಿನ ಸಿಬ್ಬಮದಿಗಳು ಕಾರಾಗೃಹದಲ್ಲೇ ಸಂಪ್ರದಾಯದಂತೆ ಸೀಮಂತ ಶಾಸ್ತ್ರ ಮಾಡಿ ಹೆರಿಗೆ ಸುಸೂತ್ರವಾಗಿ ಆಗಲೆಂದು ಶುಭ ಹಾರೈಸಿ ತವರಿಗೆ ಕಳುಹಿಸಿದ್ದಾರೆ.
ಈ ಅಪರೂಪದ ಘಟನೆಗೆ ಚಿಕ್ಕಮಗಳೂರು ನಗರದ ಹೊರ ವಲಯದಲ್ಲಿರುವ ಜಿಲ್ಲಾ ಕಾರಾಗೃಹ ಸಾಕ್ಷಿಯಾಗಿದೆ.
ನಿತ್ಯ ಬಂದಿಗಳ ದಾಖಲಾತಿ, ತಪಾಸಣೆ, ಗಲಾಟೆ, ರಾಜೀ ಸಂಧಾನಕ್ಕೆ ವೇದಿಕೆಯಾಗಿದ್ದ ಕಾರಾಗೃಹದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಜಿಲ್ಲಾ ಕಾರಾಗೃಹದಲ್ಲಿ ಮುಂಜಾನೆಯಿಂದಲೂ ಸಂಭ್ರಮ ಮೂಡಿತ್ತು. ಅರಿಶಿಣ, ಕುಂಕುಮ, ಕೈಬಳೆ, ಬಾಗಿನದ್ದೇ ಮಾತುಕತೆ ನಡೆದಿತ್ತು.
ತುಂಬು ಗರ್ಭಿಣಿಯಾಗಿದ್ದ ನೆಚ್ಚಿನ ಸಹೋದ್ಯೋಗಿಗೆ ಎಲ್ಲಾ ಸಹೋದ್ಯೋಗಿಗಳು ಆರತಿ ಬೆಳಗಿ, ಮಡಿಲು ತುಂಬುವುದರೊಂದಿಗೆ ಮನದುಂಬಿ ಹರಸಿದ್ದಾರೆ. ತಮ್ಮೊಂದಿಗೆ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆ ಲಾವಣ್ಯ ಜಿ ಅವರಿಗೆ ಕಾರಾಗೃಹದ ಸಹೋದ್ಯೋಗಿಗಳು ಸಂಪ್ರದಾಯದಂತೆ ಸೀಮಂತ ಶಾಸ್ತ್ರ ಮಾಡಿ ತವರಿಗೆ ಬೀಳ್ಕೊಟ್ಟಿದ್ದಾರೆ.
ಇದನ್ನೂ ಓದಿ : ಮೂವರಿಗೆ ಚಾಕು ಇರಿತ; ಪಿಎಫ್ಐ ಸಂಘಟನೆ ಮೇಲೆ ಆರೋಪ
ಪತಿ-ಪತ್ನಿ ಕಾರಾಗೃಹದಲ್ಲೇ ಕೆಲಸ
ಮಹಿಳಾ ಪೇದೆ ಲಾವಣ್ಯ ಅವರು ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದು, ಹೆರಿಗೆ ರಜೆಯ ಮೇಲೆ ತವರು ಮನೆಗೆ ತೆರಳಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಜಿಲ್ಲಾ ಕಾರಾಗೃಹದಲ್ಲಿ ಪೇದೆಯಾಗಿ ಲಾವಣ್ಯ ಕರ್ತವ್ಯ ನಿರ್ವಹಿಸುತ್ತಿದ್ದರು. ಎರಡು ವರ್ಷದ ಹಿಂದೆ ವಿವಾಹವಾಗಿದ್ದು, ಪತಿ ಕೂಡ ನೌಕರರಾಗಿದ್ದಾರೆ. ಇದೇ ಕಾರಾಗೃಹದಲ್ಲಿ ಪೊಲೀಸ್ ಪೆದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.
ಸಹೋದ್ಯೋಗಿ ಸ್ನೇಹಿ ವಾತಾವರಣ
ಈ ಕುರಿತು ಕಾರಾಗೃಹ ಅಧೀಕ್ಷಕ ಎಸ್. ಎಸ್ ಮೇಟಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾರಾಗೃಹದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವುದರೊಂದಿಗೆ ಸಹೋದ್ಯೋಗಿ ಸ್ನೇಹಿ ವಾತಾವರಣ ನಿರ್ಮಾಣವಾಗಬೇಕು. ಆಗಲೇ ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಹೇಳಿದ್ದಾರೆ.
ಅಧಿಕಾರಿ, ಸಿಬ್ಬಂದಿ ಎಂಬ ಭೇದಭಾವವಿಲ್ಲದೆ ಎಲ್ಲರೂ ಒಂದೇ ಕುಟುಂಬ ಎಂದು ಕಾರ್ಯ ನಿರ್ವಹಿಸಿದರೆ ಸಾರ್ವಜನಿಕವಾಗಿ ಉತ್ತಮ ಸೇವೆ ನೀಡಲು ಸಾಧ್ಯ. ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕಾರಾಗೃಹ ಸಿಬ್ಬಂದಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.