ನವದೆಹಲಿ: ದೆಹಲಿ ಕರ್ನಾಟಕ ಸಂಘಕ್ಕೆ 75 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ನಾಳೆ ಮತ್ತು ನಾಡಿದ್ದು ಅದ್ದೂರಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ನಾಳೆ 25 (ಶನಿವಾರ) ಪ್ರಧಾನಿ ನರೇಂದ್ರ ಮೋದಿ ಸಂಜೆ ಐದು ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಿದ ನಂತರ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ.
ಬರೋಬ್ಬರಿ 1 ಗಂಟೆ 45 ನಿಮಿಷಗಳ ಸಮಯ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಹೆಚ್ಚಿನ ಸಮಯವನ್ನು ದೆಹಲಿ ಕನ್ನಡಿಗರ ಜೊತೆ ಕಳೆಯಲಿದ್ದಾರೆ. ಪ್ರಧಾನಿಯಾದಗಿನಿಂದ ಇದುವರೆಗೆ ಭಾಗವಹಿಸಿರುವ ಕಾರ್ಯಕ್ರಮಗಳಲ್ಲಿ ಅತೀ ಹೆಚ್ವಿನ ಸಮಯ ನಿಗದಿ ಮಾಡಿರುವ ಕಾರ್ಯಕ್ರಮ ಅಂತಾ ಹೇಳಲಾಗ್ತಿದೆ. ಅಲ್ಲದೆ, ರಾಜಕೀಯ ಕಾರ್ಯಕ್ರಮಗಳಿಗೂ ಇಷ್ಟೊಂದು ಸಮಯವನ್ನು ಇದುವರೆಗೆ ನಿಗದಿ ಮಾಡಿಲ್ಲ ಅಂತಾ ಮಾಹಿತಿ ಇದೆ.
ನಾಳೆ ಸಂಜೆ ಐದು ಗಂಟೆಗೆ ದೆಹಲಿಯ ತಾಲ್ ಕಟೋರಾ ಸ್ಟೇಡಿಯಂಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಬರೋಬ್ಬರಿ ಮೂವತ್ತು ನಿಮಿಷಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಲಿದ್ದಾರೆ. ಅದಾದನಂತರ ಬಂದಿರುವ ‘ವಿಶೇಷ ಗಣ್ಯರ’ ಜೊತೆ ಉಭಯ ಕುಶಲೋಪರಿ ನಡೆಸಲಿದ್ದು, ಕೊನೆಯದಾಗಿ, ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ ಕುರಿತು ಸಾಂಸ್ಕೃತಿಕ ಭಾಷಣ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಸಹಜವಾಗಿ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ನೆನಯಲಿದ್ದಾರೆ ಅಂತಾ ಹೇಳಲಾಗುತ್ತಿದೆ.
ಕರ್ನಾಟಕ ಸದ್ಯದಲ್ಲೇ ವಿಧಾನಸಭೆ ಚುನಾವಣೆ ಎದುರಿಸಲಿದೆ. ಹೀಗಾಗಿ ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುವುದು ಅನುಮಾನ ಅಂತಾ ಹೇಳಲಾಗ್ತಿತ್ತು. ದೆಹಲಿ ಕಾರ್ಯಕ್ರಮಕ್ಕೆ ಮೋದಿ ಬರುವುದರಿಂದ ಯಾವುದೇ ರಾಜಕೀಯ ಲಾಭವಿಲ್ಲ. ಹೀಗೆ ಸಣ್ಣ ಸಣ್ಣ ಕಾರ್ಯಕ್ರಮಗಳಿಗೆ ಪ್ರಧಾನಿ ಬರುವುದಿಲ್ಲ. ಒಂದು ವೇಳೆ ಕಾರ್ಯಕ್ರಮಕ್ಕೆ ಬಂದರೂ ಅವರ ಘನತೆಗೆ ಗೌರವ ತರುವುದಿಲ್ಲ, ಇದೇ ರೀತಿಯ ಕಾರ್ಯಕ್ರಮಗಳಿಗೆ ಸೀಮಿತವಾಗಬೇಕಾಗುತ್ತೆ ಅಂತಾ ಬುದ್ದಿವಂತರ ವಲಯದಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಆದ್ರೆ, ಕರ್ನಾಟಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮನವಿ ಮತ್ತು ಒತ್ತಡಕ್ಕೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಬರೊಬ್ಬರಿ 1ಗಂಟೆ 45ನಿಮಿಷಗಳ ಕಾಲ ದೆಹಲಿ ಕನ್ನಡಿಗರ ಜೊತೆ ಸಮಯ ಕಳೆಯುತ್ತಿರುವುದು ಚರ್ಚಾ ವಾದಿಗಳ ಹುಬ್ಬೇರುವಂತೆ ಮಾಡಿದೆ.
ಎರಡು ದಿನಗಳ ಕಾಲ ದೆಹಲಿಯ ತಾಲ್ ಕಟೋರ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯಲಿದೆ. ಕಲಾವಿದರು ಸೇರಿದಂತೆ ಸುಮಾರು ಹತ್ತು ಸಾವಿರ ಕನ್ನಡಿಗರು ಒಟ್ಟು ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದ ಸಂಘದ ಏಳಿಗೆಗೆ ದುಡಿದ ಮಹನೀಯರನ್ನು ಒಳಗೊಂಡಂತೆ 75 ಗಣ್ಯರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಜೊತೆಗೆ 1ಸಾವಿರಕ್ಕೂ ಹೆಚ್ಚು ಕಲಾವಿದರಿಂದ ನಾನಾ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕರ್ನಾಟಕ ಸಂಘ ಆಯೋಜಿಸಿದೆ.
ಸಂತೋಷ್ ಹೊಸಹಳ್ಳಿ, ಪವರ್ ಟಿವಿ, ನವದೆಹಲಿ