ಕಾರವಾರ; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರಕನ್ನಡ ಜನ ಬೀದಿಗಿಳಿದು ಹೋರಾಟ ನಡೆಸಿದ್ದರು. ಟ್ವಿಟ್ಟರ್ ಅಭಿಯಾನ, ಪ್ರತಿಭಟನೆಗಳು ತೀವ್ರಗೊಂಡ ಕಾರಣ ಸರ್ಕಾರ ಕೂಡ ಮಣಿದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು.ಮಾತ್ರವಲ್ಲದೆ ಸ್ವತಃ ಆರೋಗ್ಯ ಸಚಿವರೇ ಆಗಮಿಸಿ ಜಾಗದ ಪರಿಶೀಲನೆ ಕೂಡ ನಡೆಸಿದ್ದರು. ಆದ್ರೆ ಇದೀಗ ಸೂಪರ್ ಸ್ಪೆಷಾಲಿಟಿ ಅಗತ್ಯತೆ ಬಗ್ಗೆ ಸರ್ಕಾರಕ್ಕೆ ಆರೋಗ್ಯ ಅಧಿಕಾರಿಗಳಿಂದ ಪ್ರಸ್ತಾವನೆಯೇ ಸಲ್ಲಿಕೆಯಾಗದಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು ಉತ್ತರಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಅದರಲ್ಲಿಯೂ ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಹೆಚ್ಚಾದ ಅಪಘಾತ, ಆಂಬುಲೆನ್ಸ್ ತೊಂದರೆ ಸೇರಿದಂತೆ ಇನ್ನಿತರ ಕಾರಣಗಳಿಂದ ಜಿಲ್ಲೆಯ ಜನ ಅದರಲ್ಲಿಯೂ ಯುವ ಸಮುದಾಯ ತೀವ್ರತರವಾಗಿ ಭಿನ್ನ ವಿಭಿನ್ನವಾಗಿ ಹೋರಾಟ ನಡೆಸಿದ್ದರು. 2019 ರಲ್ಲಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಗಮನ ಸೆಳೆಯುವ ನಿಟ್ಟಿನಲ್ಲಿ ಟ್ವಿಟ್ಟರ್ ಅಭಿಯಾನ ನಡೆಸಲಾಗಿತ್ತು. ಈ ಅಭಿಯಾನ ಟ್ರೆಂಡ್ ಆದ ಹಿನ್ನೆಲೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿಗಳು ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ವರದಿ ತರಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ರು, ಆದ್ರೆ ಇದಾಗಿ ಮೂರುವರೆ ವರ್ಷ ಕಳೆದಿದ್ದು ಈವರೆಗೂ ಆರೋಗ್ಯ ಅಧಿಕಾರಿಗಳ ವರದಿ ಮುಖ್ಯಮಂತ್ರಿ ಸಚಿವಾಲಯ ತಲುಪದಿರುವುದು ಬಯಲಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ವರದಿಯ ಪ್ರತಿ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಆರೋಗ್ಯಾಧಿಕಾರಿಗಳಿಂದ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ ಎಂದು ಉತ್ತರಿಸಿದೆ. ಈ ವಿಷಯ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಜನರ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆ ನಿರ್ಮಿಸುವ ಭರವಸೆ ನೀಡಿದ್ದು, ಅದಕ್ಕೆ ಪೂರಕವಾಗಿ ಪ್ರಸ್ತಾವನೆ ಸಲ್ಲಿಸದಿರೋದು ಇದೀಗ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ ಅರ್ಜಿ ಹಿಂಪಡೆಯುವಂತೆ ಅರ್ಜಿದಾರರಿಗೆ ಒತ್ತಡ ಕೂಡ ಹೇರಿದ್ದು ಅವಧಿ ಮುಗಿದರೂ ಮಾಹಿತಿ ನೀಡಿರಲಿಲ್ಲ. ಇದೀಗ ಹಳೆಯ ದಿನಾಂಕದೊಂದಿಗೆ ಇಮೇಲ್ ಮೂಲಕ ವರದಿ ಸಲ್ಲಿಕೆಯಾಗಿಲ್ಲ ಎಂಬ ಉತ್ತರ ನೀಡಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಸರ್ಕಾರ ಜನರಿಗೆ ಮಂಕು ಬೂದಿ ಎರಚುವ ಕೆಲಸ ಮಾಡುತ್ತಿದೆ. ಜನರ ಹೋರಾಟದ ದಿಕ್ಕು ತಪ್ಪಿಸುವ ಉದ್ದೇಶದಿಂದ ಇಂತಹ ಹುನ್ನಾರ ನಡೆಸಲಾಗಿದೆ. ಇದು ಮುಂದುವರಿದಲ್ಲಿ ಜನರು ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.
ಈ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ಅವರ ಬಳಿ ಕೇಳಿದ್ರೆ ಪ್ರಸ್ತುತ ಗುರುತು ಮಾಡಿದ ಜಾಗ ಅರಣ್ಯ ಇಲಾಖೆ ಹೆಸರಿನಲ್ಲಿರುವ ಕಾರಣ ಅದನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ತಡವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಳಿಯೂ ಚರ್ಚೆ ನಡೆಸಿದ್ದು ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಕೂಡ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಒಟ್ಟಾರೇ ಜನ ಬೀದಿಗಿಳಿದು ಹೋರಾಟ ನಡೆಸುವ ಹೊತ್ತಿಗೆ ಭರವಸೆ ನೀಡಿ ಹೋರಾಟಗಾರರನ್ನ ತಣ್ಣಗಾಗಿಸಿದ್ದ ಸರ್ಕಾರ ಇನ್ನೂ ಸಹ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸದಿರೋದು ತೀವ್ರ ಟೀಕೆಗೊಳಗಾಗಿದ್ದಂತೂ ಸತ್ಯ. ಜನರು ಇದೀಗ ಆಸ್ಪತ್ರೆಗಾಗಿ ಎರಡನೇಯ ಹಂತದ ಹೋರಾಟಕ್ಕೆ ಮುಂದಾಗುತ್ತಿದ್ದು ಅದಕ್ಕೂ ಮುನ್ನ ಸರ್ಕಾರ ಆಸ್ಪತ್ರೆಗೆ ಅಡಿಗಲ್ಲು ಹಾಕುತ್ತಾ ಅನ್ನೋದನ್ನ ಕಾದುನೋಡಬೇಕು.