Sunday, December 22, 2024

ಮತ್ತೇ ಬಾದಾಮಿಯಲ್ಲಿ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕಾರ್ಯಕರ್ತರ ಒತ್ತಾಯ.!

ಬಾಗಲಕೋಟೆ; ಮಾಜಿ ಸಿಎಂ ಸಿದ್ದರಾಮಯ್ಯನವರ ಕೇತ್ರ ಆಯ್ಕೆ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ನನ್ನ ಕ್ಷೇತ್ರ ಆಯ್ಕೆ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಸಿದ್ದರಾಮಯ್ಯ ಅಡ್ಡ ಗೋಡೆ ಮೇಲೆ ದೀಪವಿಟ್ಟಿದ್ದಾರೆ ನಿಜ. ಆದ್ರೆ ಬಾದಾಮಿ ಶಾಸಕನಾಗಿರುವ ಸಿದ್ದರಾಮಯ್ಯಗೆ ಮತ್ತೆ ಅಲ್ಲಿಂದಲೇ ಸ್ಪರ್ಧಿಸುವಂತೆ ಬೇಡಿಕೆ ಹೆಚ್ಚಿದೆ. ಆದ್ರೆ ಈ ಕುರಿತು ಜಿಲ್ಲೆಯ ಯಾವೊಬ್ಬ ನಾಯಕನು ಸಿದ್ದು ಮತ್ತೆ ಬಾದಾಮಿಯಿಂದ ಸ್ಪರ್ಧಿಸಬೇಕು ಎಂದು ಹೇಳಿರಲಿಲ್ಲ. ಆದ್ರೆ ಇದೀಗ ಜಿಲ್ಲೆಯ ಮಾಜಿ ಶಾಸಕರು ಮೌನ ಮುರಿದಿದ್ದು, ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸುವಂತೆ ಬೇಡಿಕೆ ಇಟ್ಟಿದ್ದಾರೆ.

ಸಿದ್ದರಾಮಯ್ಯ ರಾಜ್ಯ ಕಂಡ ಅಪರೂಪದ ಮಾಜಿ ಮುಖ್ಯಮಂತ್ರಿ. ಕಾಂಗ್ರೆಸ್ ಪಕ್ಷದ ಮಾಸ್ ಲೀಡರ್, ಸಿದ್ದರಾಮಯ್ಯ ಹೋದ ಕಡೆಯಲ್ಲಾ ಜನಸಾಗರ. ಸಿದ್ದು ಬರ್ತಿದ್ದಾರೆ ಅಂದ್ರೆ ಅಲ್ಲಿ ಅಭಿಮಾನಿಗಳ ಆಗರ. ಇಂತಹ ಸಿದ್ದರಾಮಯ್ಯ ಇದೀಗ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ ಅಂದ್ರೆ ಅದಕ್ಕೆ ರಾಜಕೀಯವಾಗಿ ನೂರು ಕಾರಣಗಳಿರುತ್ತದೆ. ಆದ್ರೆ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರೋ ಬಾದಾಮಿ ಜನತೆ ಸಿದ್ದು ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಇವತ್ತಿಗೂ ಇಡುತ್ತೆಲೇ ಇದ್ದಾರೆ.

ಯಾವಾಗ ಸಿದ್ದರಾಮಯ್ಯ ಬಾದಾಮಿ ತುಂಬಾ ದೂರ ಆಗುತ್ತದೆ ಎಂದು ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ರೋ ಆವಾಗ್ಲೆ ಕ್ಷೇತ್ರದ ಜನತೆ, ಅಭಿಮಾನಿಗಳು ಸುದ್ದಿಗೋಷ್ಠಿ ನಡೆಸಿ ಸಿದ್ದು ಬೇರೆ ಎಲ್ಲೂ ಹೋಗಬಾರದು, ಅವರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡ್ತಿವಿ. ಒಂದು ವೇಳೆ ಬೇರೆಡೆ ಹೋದ್ರೆ, ಅವರ ಮನೆ ಮುಂದೆ ಧರಣಿ ಕೂಡ್ತಿವಿ, ವಿಷ ಕುಡಿದು ಪ್ರಾಣ ಸಹ ಕಳೆದುಕೊಳ್ತಿವಿ ಎನ್ನುವ ಮಾತುಗಳನ್ನ ಸಹ ಆಡಿದ್ರು. ಮೇಲಿಂದ ಮೇಲೆ ಸಿದ್ದು ಬಾದಾಮಿಯಿಂದಲೇ ಸ್ಪರ್ಧಿಸಬೇಕೆಂದು ಬಾದಾಮಿ ಜನತೆ ಒತ್ತಾಯಿಸಿದರು.

ಆದ್ರೆ ಇವರೆಗೂ ಜಿಲ್ಲೆಯ ಯಾವೊಬ್ಬ ನಾಯಕನೂ ಸಹ ಸಿದ್ದು ಮತ್ತೆ ಬಾಗಲಕೋಟೆ ಜಿಲ್ಲೆಯಿಂದ, ಅದರಲ್ಲೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಮುಂದೆ ಬಂದು ಹೇಳಿಕೆ ಕೊಟ್ಟಿರಲಿಲ್ಲ. ಇದ್ರಿಂದ ಜಿಲ್ಲೆಯ ಮಾಜಿ ಶಾಸಕರಿಗೆ ಸಿದ್ದು ಮತ್ತೆ ಬಾದಾಮಿಗೆ ಸ್ಪರ್ಧಿಸೋದ್ರ ಬಗ್ಗೆ ಆಸಕ್ತಿ ಇರಲಿಕ್ಕಿಲ್ಲ ಎಂಬ ಭಾವನೆ ವ್ಯಕ್ತವಾಗಿತ್ತು. ಆದ್ರೆ ಇದೀಗ ಜಿಲ್ಲೆ ಮಾಜಿ ಶಾಸಕರು ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸೋದ್ರ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಅವರು ಬಾದಾಮಿಯಿಂದ ಸ್ಪರ್ಧಿಸಲಿ ಎನ್ನೋದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಿಂದ ಸ್ಪರ್ಧಿಸಿದ್ರೆ ಈ ಭಾಗದಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗುತ್ತದೆ ಎಂದು ಕಳೆದ ಚುನಾವಣೆಯಲ್ಲಿ ಹೇಳಲಾಗಿತ್ತು. ಆದ್ರೆ ಲೆಕ್ಕಾಚಾರ ಉಲ್ಟಾ ಆಗಿ ಗೆಲ್ಲುವ ಅಭ್ಯರ್ಥಿಗಳು ಸೋಲು ಕಂಡಿದ್ರು. ಹೀಗಾಗಿ ಈ ಭಾರಿ ಸಿದ್ದರಾಮಯ್ಯ ಮತ್ತೆ ಬಾದಾಮಿಯಿಂದ ಸ್ಪರ್ಧಿಸಲಿ ಎಂದು ಅಭಿಮಾನಿಗಳು ಎಷ್ಟೇ ಒತ್ತಾಯ ಮಾಡಿದ್ರೂ, ಇವರೆಗೂ ಯಾವ ನಾಯಕರು ಸಹ ಹೇಳಿಕೆ ನೀಡಿರಲಿಲ್ಲ. ಇದೀಗ ಜಿಲ್ಲೆಯ ಬಾಗಲಕೋಟೆ ಕ್ಷೇತ್ರದ ಮಾಜಿ ಶಾಸಕ ಹೆಚ್.ವಾಯ್ ಮೇಟಿ. ಬೀಳಗಿಯ ಮಾಜಿ ಶಾಸಕ ಜೆ.ಟಿ.ಪಾಟೀಲ್ ಮೌನ ಮುರಿದಿದ್ದು, ಜಿಲ್ಲೆಯಿಂದ ಸಿದ್ದರಾಮಯ್ಯ ಸ್ಪರ್ಧಿಸಲಿ ಎಂಬುದು ಎಲ್ಲರ ಆಶಯ ಆಗಿದೆ.

ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಏಳು ಕ್ಷೇತ್ರದ ಮುಖಂಡರು ಅವರನ್ನ ಆಹ್ವಾನಿಸಿದ್ದೇವೆ. ಅವರನ್ನ ಆಹ್ವಾನಿಸಿಲ್ಲ ಎಂಬುದು ಸುಳ್ಳು, ಅನೇಕ ಬಾರಿ ಅವರನ್ನ ಭೇಟಿ ಆಗಿದ್ದೇವೆ. ಕಳೆದ ಬಾರಿ ವೀರಶೈವ ಲಿಂಗಾಯತ, ಸದಾಶಿವ ವರದಿ ಜಾರಿ ವಿಚಾರಕ್ಕೆ ಹಿನ್ನಡೆಯಾಗಿದೆ. ಅಲ್ಲದೇ ಶ್ರೀರಾಮುಲು ಸ್ಪರ್ಧೆಯಿಂದ ಮತಗಳು ಬರಲಿಲ್ಲ. ಆದ್ರೆ ಈ ಬಾರಿ ಎಸ್ಸಿ,ಎಸ್ಟಿ ಸಮುದಾಯದ 70 ಪರ್ಷಂಟ್ ಮತಗಳು ನಮಗೆ ಬರುತ್ತೆ. ಕಾರಣ ಅವರೆಲ್ಲರಿಗೂ ಬಿಜೆಪಿ ಆಡಳಿತದ ಬಗ್ಗೆ ಬೇಸರ ಇದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ, ಮೇಲ್ವರ್ಗದ ಬಡವರಿಂದ ಹಿಡಿದು ದಲಿತ ಸಮುದಾಯದ ಉದ್ದಾರಕ್ಕಾಗಿ ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದರು.

ಒಟ್ಟಿನಲ್ಲಿ ಬಾರಿ ಕುತೂಹಲ ಮೂಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ ಕ್ಷೇತ್ರ ಹುಡುಕಾಟ ವಿಚಾರ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಆದ್ರೆ ಬಾದಾಮಿಯಿಂದ ಮತ್ತೆ ಸಿದ್ದು ಸ್ಪರ್ಧೆ ಮಾಡಲಿ ಎಂಬ ಕ್ಷೇತ್ರದ ಜನತೆಯ ಒತ್ತಾಯಕ್ಕೆ ಇದೀಗ ಜಿಲ್ಲೆಯ ಮಾಜಿ ಶಾಸಕರು ದ್ವನಿಗೂಡಿಸಿದ್ದು, ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ನಿಲ್ತಾರೆ ಅನ್ನೋದು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES