Wednesday, January 22, 2025

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಿಸಿದ ಶಾರೀಕ್ ಆರೋಗ್ಯದಲ್ಲಿ ಚೇತರಿಕೆ

ಮಂಗಳೂರು; ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಮೊಹಮ್ಮದ್ ಶಾರೀಕ್ ಚಿಕಿತ್ಸೆಯಿಂದ ಚೇತರಿಕೆ ಕಂಡಿದ್ದಾನೆ. ಇದರ ಸುಳಿವು ಸಿಗುತ್ತಲೇ ಪೊಲೀಸರು ಆತನನ್ನು ಪ್ರಾಥಮಿಕ ವಿಚಾರಣೆ ನಡೆಸಿದ್ದು, ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

ಹೌದು.. ಕಳೆದ ಎರಡು ವಾರಗಳಿಂದಲೂ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಂಬರ್ ಮೊಹಮ್ಮದ್ ಶಾರೀಕ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಈ ಬಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡುತ್ತಲೇ ತನಿಖಾಧಿಕಾರಿಗಳು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹಲವಾರು ಪ್ರಶ್ನೆಗಳನ್ನು ಕೇಳಿ, ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಪ್ರಮುಖವಾಗಿ ಆತನ ಸಹಚರರು, ಸಹಾಯ ನೀಡಿದವರ ಬಗ್ಗೆ ಪೊಲೀಸರು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಇದೇ ವೇಳೆ, ಮಂಗಳೂರಿನ ಕಂಕನಾಡಿ ಠಾಣೆಯಲ್ಲಿ ದೇಶದ್ರೋಹ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ಎನ್ಐಎಗೆ ಅಧಿಕೃತವಾಗಿ ವಹಿಸಲಾಗಿದೆ. ಇದರಂತೆ, ಎನ್ಐಎ ಅಧಿಕಾರಿಗಳು ಮಂಗಳೂರಿನ ಕಮಿಷನರ್ ಕಚೇರಿಗೆ ಬಂದು ಈ ಕುರಿತ ಕಡತಗಳನ್ನು ಪಡೆದಿದ್ದಾರೆ.

ಬಾಂಬ್ ಸ್ಫೋಟ ಘಟನೆ ನಡೆದ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಈಗ ಎನ್ಐಎ ವಿಭಾಗದ ಮೂರು ತಂಡಗಳು ಮಂಗಳೂರು ಕೇಂದ್ರೀಕರಿಸಿ ತನಿಖೆಯಲ್ಲಿ ತೊಡಗಿವೆ. ಒಂದು ತಂಡ ಕೇರಳದಲ್ಲಿ ಬೀಡು ಬಿಟ್ಟಿದ್ದು, ಶಾರೀಕ್ ಗೆ ನೆರವಿತ್ತವರ ಬಗ್ಗೆ ತನಿಖೆ ನಡೆಸುತ್ತಿದೆ. ಶಾರೀಕ್ ಮೈಸೂರಿಗೆ ಆಗಮಿಸುವುದಕ್ಕೂ ಮುನ್ನ ಕೇರಳದ ಕೊಚ್ಚಿ ಬಳಿಯ ಆಲುವಾದಲ್ಲಿ ಅವಿತುಕೊಂಡಿದ್ದ. ಅಲ್ಲಿರುವಾಗಲೇ ದಕ್ಷಿಣ ಭಾರತದ ವಿವಿಧ ಕಡೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು ಎನ್ನುವ ಮಾಹಿತಿಗಳಿವೆ. ಹಾಗಾಗಿ ಆತನ ಜೊತೆಗೆ ಹತ್ತಿರದ ನಂಟು ಹೊಂದಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮೈಸೂರಿನಲ್ಲಿ 40ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎನ್ನುವ ಮಾಹಿತಿಗಳಿವೆ. ಇದಲ್ಲದೆ, ಕೇರಳದ ಕಾಸರಗೋಡು, ಕಣ್ಣೂರಿನಲ್ಲಿಯೂ ಶಾರೀಕ್ ನೆಟ್ವರ್ಕ್ ಬಗ್ಗೆ ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಶಾರೀಕ್ ಆರೋಗ್ಯದಲ್ಲಿ ಚೇತರಿಕೆ ಆಗಿರುವುದರಿಂದ ಆತ ನೀಡುವ ಮಾಹಿತಿಗಳೇ ತನಿಖಾ ತಂಡಕ್ಕೆ ಮಹತ್ವದ್ದಾಗಿದ್ದು, ಅದೇ ಆಧಾರ ಇಟ್ಟುಕೊಂಡು ತನಿಖೆ ಸಾಗಿದೆ. ಪೊಲೀಸರು ಪ್ರಾಥಮಿಕವಾಗಿ ಒಂದಷ್ಟು ಪ್ರಶ್ನೆಗಳನ್ನು ಕೇಳಿ, ಮಹತ್ವದ ಮಾಹಿತಿಗಳನ್ನು ಪಡೆದಿದ್ದಾರೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಇದಲ್ಲದೆ, ಮೊಹಮ್ಮದ್ ಶಾರೀಕ್ ಕೇರಳದಲ್ಲಿ ಡ್ರಗ್ಸ್ ಜಾಲದ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿದ್ದು, ಅದೇ ಜಾಲದಿಂದ ಹಣಕಾಸು ನೆರವನ್ನೂ ಪಡೆಯುತ್ತಿದ್ದನೇ ಎನ್ನುವ ಅನುಮಾನ ಮೂಡಿದೆ. ಕೇರಳದ ಡ್ರಗ್ಸ್ ಜಾಲದಲ್ಲಿ ಒಂದೇ ಸಮುದಾಯದ ಮಂದಿ ಹೆಚ್ಚಾಗಿ ತೊಡಗಿಸಿಕೊಂಡಿದ್ದು, ಅದರಿಂದ ಬರುವ ಆದಾಯವನ್ನು ದೇಶ ವಿರೋಧಿ ಕೃತ್ಯಕ್ಕೆ ಹೂಡಿಕೆ ಮಾಡಲಾಗುತ್ತಿತ್ತು ಅನ್ನುವ ಶಂಕೆಯಲ್ಲಿ ತನಿಖೆ ಸಾಗಿದೆ. ಒಟ್ಟಿನಲ್ಲಿ ಐಸಿಸ್ ನೆಟ್ವರ್ಕನ್ನೂ ಹೊಂದಿದ್ದ ಬಾಂಬರ್ ಶಾರೀಕ್ ಆರೋಗ್ಯದಲ್ಲಿ ಚೇತರಿಕೆ ಆಗುತ್ತಿದ್ದಂತೆ ಮಹತ್ವದ ಬೆಳವಣಿಗೆ ಆಗುವುದರಲ್ಲಿ ಸಂಶಯ ಇಲ್ಲ.

ಗಿರಿಧರ್ ಶೆಟ್ಟಿ ಪವರ್ ಟಿವಿ ಮಂಗಳೂರು

RELATED ARTICLES

Related Articles

TRENDING ARTICLES