ಕಾರವಾರ : ನಿಯಮ ಅನುಸಾರವಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ 70% ಅಧಿಕ ಪೂರ್ಣಗೊಂಡಿರಬೇಕು. ಜೊತೆಗೆ ವಾಹನಗಳ ಸಂಚಾರ ಸುಗಮವಾಗಿರಬೇಕು. ಆಗ ಮಾತ್ರ ಟೋಲ್‌ಗಳ ಅಳವಡಿಕೆ ಮಾಡಿ ಟೋಲ್ ಸಂಗ್ರಹಕ್ಕೆ ಅನುಮತಿ ಇದೆ. ಆದ್ರೆ, ಕಾರವಾರದಿಂದ ಅಂಕೋಲ ಮಧ್ಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ಧದಷ್ಟು ಕೂಡ ಕಂಪ್ಲೀಟ್ ಆಗಿಲ್ಲ. ಆದರೂ, ಹಟ್ಟಿಕೇರಿ ಬಳಿ ಟೋಲ್ ನಿರ್ಮಾಣ ಮಾಡಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ, ಕೂಡಲೇ ಇದನ್ನ ಸರ್ಕಾರ, ಜಿಲ್ಲಾಡಳಿತ ಪರಿಶೀಲನೆ ಮಾಡಿ ಇದಕ್ಕೆ ಕಡಿವಾಣ ಹಾಕಬೇಕು ಅಂತಾ ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ.
ಇನ್ನೂ 2,639 ಕೋಟಿ ರೂಪಾಯಿ ವೆಚ್ಚದಲ್ಲಿ ಕುಂದಾಪುರದ ಗಡಿಯಿಂದ ಗೋವಾ ಗಡಿಯವರೆಗೆ ಹೆದ್ದಾರಿ ನಡೆಯಬೇಕಾಗಿತ್ತು.. ಇದುವರೆಗೆ ಶೇಕಡಾ 60ರಷ್ಟು ಕಾಮಗಾರಿ ಮುಗಿದಿಲ್ಲ. ಇದು ಪ್ರತಿನಿತ್ಯ ವಾಹನ ಸವಾರರಿಗೆ ಕಿರಿಕಿರಿಯಾಗ್ತಿದೆ. ಆದರೆ, ಮತ್ತೊಂದು ಕಡೆ ಸುಗಮ ಸಂಚಾರವಿಲ್ಲದಿದ್ದರು ಟೋಲ್ ಕಟ್ಟುವ ಹೊರೆ ಕೂಡ ಇದೆ. ಹೀಗಾಗಿ ಸುರತ್ಕಲ್ ಟೋಲ್ ಬಂದ್ ಮಾಡಿದಂತೆ ಅಂಕೋಲ ತಾಲೂಕಿನ ಹಟ್ಟಿಕೇರಿ ಟೋಲ್ ಕೂಡ ಬಂದ್ ಮಾಡಿ ಎಂದು ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ. ಇನ್ನು ಈ ಕುರಿತು ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ಕೂಡಲೇ ಪರಿಶೀಲನೆ ಮಾಡಿ, ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಅಂತಾ ಹೇಳುತ್ತಾರೆ.
ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಕಾರವಾರದಿಂದ ಅಂಕೋಲದವರೆಗೆ ಅರೆಬರೆ ಆಗಿದ್ದು ವಾಹನ ಸವಾರರು ನಿತ್ಯ ಪರದಾಡುತ್ತಿದ್ದಾರೆ.. ಹೀಗಾಗಿ ಜನರು ಟೋಲ್ ಸಂಗ್ರಹ ಮಾಡಬೇಕಾದರೆ ಮೊದಲು ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಇಲ್ಲವಾದರೆ, ಟೋಲ್ ಬಂದ್ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ.
ಉದಯ್ ಬರ್ಗಿ, ಪವರ್ ಟಿವಿ, ಕಾರವಾರ