ಮೈಸೂರು: ಜಿಲ್ಲಾ ಕುರುಬ ಸಮುದಾಯ ವತಿಯಿಂದ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75 ನೇ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.
ಹುಟ್ಟು ಹಬ್ಬ ಆಚರಿಸಿಕೊಳ್ಳುವ ಸಮಯದಲ್ಲಿ ಕೇಕ್ನಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಹೆಸರಿರುವ ಬೃಹತ್ ಕೇಕ್ನ್ನ ಕೈ ಬೆರಳಿನಲ್ಲಿ ಕಟ್ ಮಾಡಿದರು. ಈ ವೇಳೆ ಕೇಕ್ ನಲ್ಲಿದ್ದ ಪ್ರತಿಯೊಂದು ಸಾಲುಗಳನ್ನ ಸಿದ್ದರಾಮಯ್ಯ ಅವರು ಓದಿದರು.
ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಕುರುಬರು ಅಂತಾ ಹೇಳಿಕೊಳ್ಳಲು ನಾಚಿಕೆ ಪಡುತ್ತಿದ್ದರು. ಕಾಲೇಜುಗಳಲ್ಲಿ ಕುರುಬರು ಅಂತಾ ಹೇಳಲು ಹಿಂಜರಿಕೆ ಇತ್ತು. ಹೀಗಾಗಿ ಗೌಡರು ಅಂತಾ ಹೇಳಿಕೊಳ್ಳುತ್ತಿದ್ದರು. ನನ್ನ ಸಹೋದರ ಎಲ್ಲರ ಹೆಸರಿನಲ್ಲಿ ಗೌಡ ಅಂತಾ ಇದೆ. ನಮ್ಮ ಊರಿನವರು ಎಲ್ಲರೂ ಗೌಡರು ಅಂತಾ ಬರೆದುಕೊಳ್ಳುತ್ತಿದ್ದರು. ನನಗೆ ಮಾತ್ರ ನಮ್ಮ ಮೇಷ್ಟ್ರು ಸಿದ್ದರಾಮಯ್ಯ ಅಂತಾ ಬರೆದುಕೊಂಡರು.
ಕೆಲವರು ಜಾತಿ ಹೆಸರು ಹೇಳಿಕೊಳ್ಳಲು ನಾಚಿಕೊಳ್ಳುತ್ತಿದ್ದರು. ಹೇಗೋ ಎಲ್ಲರನ್ನೂ ಹುಡುಕಿ ಸೇರಿಸಿ ಸಂಘ ಉದ್ಘಾಟನೆ ಮಾಡಿದೇವು. ಆ ಮೂಲಕ ಎಲ್ಲಾ ಕಡೆ ಸಮುದಾಯದ ವಿದ್ಯಾರ್ಥಿಗಳ ಸಂಘಟನೆ ಮಾಡಲಾಯಿತು. ಆ ಮೇಲೆ ಕುರುಬ ಅಂತಾ ಹೇಳಲು ಧೈರ್ಯ ಬಂತು ಎಂದರು.
1991ರಲ್ಲಿ ಕೊಪ್ಪಳದಲ್ಲಿ ಸಂಸದ ಚುನಾವಣೆಗೆ ನಿಂತಿದ್ದೆ. ಕನಕ ಜಯಂತಿ ಮಾಡಿದ ಮೇಲೆ ಆ ಭಯ ಹೋಗಿದೆ. ಕನಕದಾಸರಿಗೆ ಹೆಜ್ಜೆ ಹೆಜ್ಜೆಗೆ ಅವಮಾನ. ನಮ್ಮ ದೇಶದ ಜಾತಿ ವ್ಯವಸ್ಥೆ ನಿಂತ ನೀರಾಗಿದೆ. ಚಲನೆ ಇಲ್ಲದ ಕಡೆ ಬದಲಾವಣೆ ಸಾಧ್ಯವಿಲ್ಲ. ನಾನು ಬಾಲ್ಯದಲ್ಲಿ ಬಾವಿಯಿಂದ ನೀರು ತಂದು ದನ ಕರುಗಳಿಗೆ ನೀರು ಕುಡಿಸುವ ಕೆಲಸ ಮಾಡಿದ್ದೇನೆ. ಬಾವಿಯಲ್ಲಿ ಕಸ ತುಂಬಿರುತಿತ್ತು. ಅದನ್ನು ತರಿಸಿ ನೀರು ತರುತ್ತಿದ್ದೆ.
ಆರ್ಎಸ್ಎಸ್ನವರು ಮುಸ್ಲಿಂರನ್ನು ಬೆದರು ಗೊಂಬೆಯಾಗಿಟ್ಟುಕೊಂಡು ದೇಶ ಒಡೆಯುವ ಕೆಲಸ ಮಾಡಲಾಗಿದೆ. ವಾಲ್ಮೀಕಿ ಕನಕದಾಸರ ಪ್ರತಿಮೆ ಮಾಡಿದ್ದು ನಾವು. ಅದರ ಲಾಭ ಮಾಡಿಕೊಳ್ಳುವವರು ಬೇರೆ. ಕಳ್ಳರು ಸುಳ್ಳು ಹೇಳಿ ಬಿಡುತ್ತಾರೆ. ನಾವು ದೇಶ ಭಕ್ತರು ಆರ್ ಎಸ್ ಎಸ್ ದೇಶಭಕ್ತರನ್ನು ಹುಟ್ಟಿ ಹಾಕುವ ಸಂಸ್ಥೆ ಅಂತಾರೆ. ತ್ಯಾಗ ಬಲಿದಾನದವರು ಒಬ್ಬ ಆರ್ ಎಸ್ ಎಸ್‌ನವರು ಇದ್ದಾರಾ? ಆರ್ ಎಸ್ ಎಸ್‌ನ ಒಬ್ಬ ಸ್ವಾತಂತ್ರ್ಯ ಹೋರಾಟಗಾರರನ್ನು ತೋರಿಸಿ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.