Tuesday, January 28, 2025

ಕಾಂಗ್ರೆಸ್ ಮೊಸಳೆ ಕಣ್ಣೀರು ಹಾಕುತ್ತಿದೆ : ಬಿ.ವೈ. ರಾಘವೇಂದ್ರ

ಶಿವಮೊಗ್ಗ : ಕಾಂಗ್ರೆಸ್ ನವರು, ಸಂತ್ರಸ್ಥರ ಪರವಾಗಿ ಮೊಸಳೆ ಕಣ್ಣೀರು ಹಾಕುವ ಕೆಲಸ ಮಾಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಟೀಕಿಸಿದ್ದಾರೆ.

ಇಂದು ಸುದ್ಧಿಗೋಷ್ಟಿ ನಡೆಸಿ ಈ ಬಗ್ಗೆ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಟೀಕೆ ಮಾಡಿದ ಅವರು, ಕೇವಲ ತೋರಿಕೆಗಾಗಿ, ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಶರಾವತಿ ಸಂತ್ರಸ್ಥರ ಹೋರಾಟ ನಡೆದಿದೆ ಎಂದು ಟೀಕಿಸಿದ್ದಾರೆ. ರೈತರ ಬಗ್ಗೆ ನಮಗೆ ಕಾಳಜಿ ಇಲ್ಲ ಎಂಬ ಬಗ್ಗೆ ಮಾತನಾಡುವ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಕೆಲವು ಪ್ರಶ್ನೆ ಕೇಳಬೇಕಿದೆ. ಶರಾವತಿ ಮುಳುಗಡೆ 58-60 ರ ಇಸವಿಯಲ್ಲಿ ನಡೆದಿದ್ದು, ಪುನರ್ವಸತಿಗಾಗಿ ಸರ್ಕಾರಿ ಆದೇಶಗಳು ಆಗಿವೆ. ಪುನರ್ವಸತಿಗಾಗಿ ಭೂಮಿ‌ ಬಿಡುಗಡೆಯಾಗಿ 60 ವರ್ಷವಾದರೂ, ಅದಕ್ಕೆ ಹಕ್ಕುಪತ್ರ ಕೊಡಿಸುವ ಕೆಲಸ ಅವರಿಂದ ಆಗಲಿಲ್ಲ. ಅಂದೇ ಈ ಕೆಲಸ ಮಾಡಿದ್ದರೆ ಪಾದಯಾತ್ರೆ ಅವಶ್ಯಕತೆ ಇರಲಿಲ್ಲ.

1980 ರಲ್ಲಿ ಅರಣ್ಯ ಕಾಯ್ದೆ ಬರುವ ಮೊದಲು ಬಗೆಹರಿಸುವ ಕೆಲಸ ರಾಜ್ಯ ಸರ್ಕಾರಕ್ಕೆ ಇತ್ತು. ಜಿಲ್ಲೆಯ ಅನೇಕ ನಾಯಕರು ಆ ವೇಳೆ ಮಂತ್ರಿ ಆಗಿದ್ದರು. ನಿಮ್ಮದೇ ಸರ್ಕಾರ ಇದ್ದರೂ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಐದು ವರ್ಷ ಸರ್ಕಾರ ಇತ್ತು. ಈ ವೇಳೆಯಾದರೂ ಪ್ರಾಮಾಣಿಕ ಪ್ರಯತ್ನ ಮಾಡಬಹುದಿತ್ತು. 2018 ರಲ್ಲಿ ಮತ್ತೆ ಚುನಾವಣೆ ಬರುತ್ತೆ ಅಂತಾ ಆಗ ಪ್ರಯತ್ನ ಮಾಡಿದ್ರಿ. ಎಲ್ಲಾ ಕಾನೂನು ಗೊತ್ತಿರುವ ‌ಹಿರಿಯರು ಇದ್ದರು. ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕು ಎಂಬ ಪರಿಜ್ಞಾನ ಇರಲಿಲ್ಲವಾ ಎಂದು ಟೀಕಿಸಿದ್ದಾರೆ.

ಕೇವಲ ಚುನಾವಣೆಗಾಗಿ 2018 ರಲ್ಲಿ ಪ್ರಯತ್ನ ಮಾಡಿದ್ರಿ. ಕೇಂದ್ರ ಸರ್ಕಾರದ ಅನುಮತಿ ಪಡೆಯುವಂತೆ ಹೈಕೋರ್ಟ್ ಆದೇಶಿಸಿದೆ. ಇವರು ಮಾಡಿದ ತಪ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇನ್ನು ಎಷ್ಟು ವರ್ಷ ಶರಾವತಿ ಮುಳುಗಡೆ, ಬಗರ್ ಹುಕುಂ ಅಂತಾ ಹೋರಾಟ ಮಾಡ್ತೀರಾ…? ನಿಮ್ಮ ರಾಜಕಾರಣಕ್ಕಾಗಿ ಮುಗ್ಧ ರೈತರನ್ನು ಇನ್ನು ಎಷ್ಟು ವರ್ಷ ಬಳಕೆ ಮಾಡಿಕೊಳ್ಳುತ್ತೀರಾ….? ಯಾಕೆ ಪಾದಯಾತ್ರೆಯಲ್ಲಿ ತೊಡಗಿಸಿಕೊಳ್ಳುತ್ತೀರಾ….? ರೈತರ ಬಗ್ಗೆ ನಮಗೆ ಗೌರವ, ಅಭಿಮಾನ ಇದೆ. ಆದರೆ ರೈತರ ಹೆಸರಿನಲ್ಲಿ ಹೋರಾಟ ಮಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ ಎಂದು ಆಪಾದಿಸಿದ್ದಾರೆ.

ನಮಗಿರುವ ಮಾಹಿತಿ ಪ್ರಕಾರ ಮೊನ್ನೆ ಹೋರಾಟದಲ್ಲಿ ರೈತರು ಯಾರು ಭಾಗವಹಿಸಿಲ್ಲ. ನಮ್ಮ ನಾಯಕರಾದ ಯಡಿಯೂರಪ್ಪ ಹಾಗೂ ಪಕ್ಷ, ಈ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಈ ಬಗ್ಗೆ ಚರ್ಚಿಸಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಅರಣ್ಯಾಧಿಕಾರಿಗಳು, ಕಂದಾಯ ಅಧಿಕಾರಿಗಳು‌ ಜಂಟಿ‌ ಸರ್ವೇ ನಡೆಸಿ ಕೇಂದ್ರಕ್ಕೆ ವರದಿ‌ ನೀಡುತ್ತಾರೆ.

ಕೆಲವರು ಸಿಎಂ ವಿರುದ್ದ ಧಮ್ಮು, ತಾಕತ್ ಪದ ಬಳಕೆ ಮಾಡಿದ್ದಾರೆ. ನಾನು ಅವರು ಬಳಸಿದ ಪದ ಬಳಕೆ ಮಾಡುವುದಿಲ್ಲ. ಧಮ್ಮು, ತಾಕತ್ ಇರೋದಕ್ಕೆ ದೇಶದಲ್ಲಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಶೋಷಿತ, ಪೀಡಿತ ರೈತರ ಬಾಳಿಗೆ ಬೆಳಕು‌ ಮೂಡಿಸಲು ಹೊರಟಿರುವ ಪ್ರಧಾನಿ‌ ಹಾಗೂ ಸಿಎಂ ವಿರುದ್ದ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕೆಂದು ಬಿ.ವೈ. ರಾಘವೇಂದ್ರ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES