Saturday, January 4, 2025

ಬಣ್ಣದಲೋಕಕ್ಕೆ ಗೆಜ್ಜೆ ಕಟ್ಟಿದ ಲವ್ಲಿಸ್ಟಾರ್ ಪುತ್ರಿ ಅಮೃತಾ..!

ಗುರು- ಶಿಷ್ಯರು ಚಿತ್ರದಿಂದ ಮಗ ಏಕಾಂತ್​ನನ್ನ ಇಂಡಸ್ಟ್ರಿಗೆ ಲಾಂಚ್ ಮಾಡಿದ್ದ ಲವ್ಲಿಸ್ಟಾರ್ ಪ್ರೇಮ್, ಇದೀಗ ಮಗಳು ಅಮೃತಾಳನ್ನೂ ಬಣ್ಣದಲೋಕಕ್ಕೆ ಕರೆತಂದಿದ್ದಾರೆ. ಬಟ್ಟಲು ಕಣ್ಣಿನ ಹುಡುಗಿ ಅಮೃತಾ ನಟಿಸ್ತಿರೋ ಸಿನಿಮಾ ಯಾವುದು..? ಆಕೆಯನ್ನ ಪ್ರಾಪರ್ ಆಗಿ ಲಾಂಚ್ ಮಾಡೋಕೆ ಮುಂದಾದ ಸ್ಟಾರ್ ಯಾರು ಅನ್ನೋದ್ರ ಇನ್​ಸೈಡ್ ಕಹಾನಿ ನಿಮಗಾಗಿ ಕಾಯ್ತಿದೆ. ನೀವೇ ಓದಿ.

  • ಬಟ್ಟಲು ಕಣ್ಣಿನ ಹುಡ್ಗಿಯನ್ನು ಲಾಂಚ್ ಮಾಡ್ತಿದ್ದಾರೆ ಡಾಲಿ
  • ಗುರು- ಶಿಷ್ಯರು ಚಿತ್ರದಲ್ಲಿ ಮಗ ಏಕಾಂತ್ ಇಂಡಸ್ಟ್ರಿಗೆ ಎಂಟ್ರಿ
  • ಅಪ್ಪನಂತೆ ಮಗಳೂ ಸಹ ಹಳ್ಳಿ ಹುಡ್ಗಿಯಾಗಿ ಮೊದಲ ಹೆಜ್ಜೆ

ನೆನಪಿರಲಿ ಖ್ಯಾತಿಯ ಲವ್ಲಿಸ್ಟಾರ್ ಪ್ರೇಮ್ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಮೂಲಕ ಲವ್ಲಿಸ್ಟಾರ್ ಲವ್ಲಿ ಪುತ್ರಿ ಅಮೃತಾ ಪ್ರೇಮ್, ತಮ್ಮ ಸಿನಿ ಕರಿಯರ್​ನ ಶುರು ಮಾಡುತ್ತಿದ್ದಾರೆ. ಡಾಲಿ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿ ಬರ್ತಿರೋ ಟಗರು ಪಲ್ಯ ಸಿನಿಮಾ ಮೂಲಕ ನಾಯಕ ನಟಿಯಾಗಿ ಬಟ್ಟಲು ಕಣ್ಣಿನ ಹುಡುಗಿ ಅಮೃತಾ ಚಿತ್ರರಂಗಕ್ಕೆ ಹೆಜ್ಜೆ ಇಡ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅಮೃತಾ ಪ್ರೇಮ್ ಲುಕ್ ಗಮನ ಸೆಳೆಯುತ್ತಿದೆ.

ನಿರ್ದೇಶಕ ಉಮೇಶ್. ಕೆ. ಕೃಪ, ಸಿನಿಮಾಗೆ ಫ್ರೆಶ್ ಫೇಸ್ ಹುಡುಕಾಟದಲ್ಲಿದ್ದರಂತೆ. ಕಾರ್ಯಕ್ರಮವೊಂದರಲ್ಲಿ ಪ್ರೇಮ್ ಪುತ್ರಿ ಭೇಟಿಯಾದಾಗ ಈ ಸಿನಿಮಾ ಬಗ್ಗೆ ಹೇಳಿದ್ರಂತೆ. ಕಥೆ ಕೇಳಿ ಹೇಳುತ್ತೇನೆ ಎಂದಿದ್ದ ಅವ್ರು, ಕೊನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರವನ್ನು ಅಮೃತಾ ಪ್ರೇಮ್ ನಿರ್ವಹಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಕಳೆದ 20 ದಿನಗಳಿಂದ ಅವರಿಗೆ ವರ್ಕ್​ಶಾಪ್ ಮಾಡಿಸ್ತಿದ್ದಾರಂತೆ ಡೈರೆಕ್ಟರ್.

ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಬಗ್ಗೆ ನಟ ನೆನಪಿರಲಿ ಪ್ರೇಮ್ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಒಬ್ಬ ನಟನಾಗಿ ಮಗಳು ಚಿತ್ರರಂಗಕ್ಕೆ ಬರುತ್ತಿರೋದು ಖುಷಿ ಇದೆ. ಆಕೆ ಓದುವುದರಲ್ಲೂ ಡಿಸ್ಟಿಂಕ್ಷನ್, ಈಗ ನಟಿಯಾಗಿ ಸಿನಿಮಾಗೂ ಬರುತ್ತಿದ್ದಾಳೆ. ಚಿತ್ರದ ಪಾತ್ರಕ್ಕಾಗಿ ಹಲವು ದಿನಗಳಿಂದ ಸಿದ್ದತೆ ನಡೆಸುತ್ತಿದ್ದಾಳೆ. ನಿರ್ದೇಶಕ ಉಮೇಶ್.ಕೆ.ಕೃಪ ಒಳ್ಳೆಯ ಕಥೆ ಮಾಡಿಕೊಂಡಿದ್ರು. ಕಥೆ ಕೇಳಿದ ಮೇಲೆ ಬೇಡ ಎನ್ನಲಾಗಲಿಲ್ಲ. ಕನ್ನಡ ಜನತೆ ಆಕೆಗೆ ಪ್ರೀತಿ ಪ್ರೋತ್ಸಾಹ ನೀಡಿ ಬೆಳಸಬೇಕು ಅಂತ ಖುಷಿ ವ್ಯಕ್ತಪಡಿಸಿದ್ದಾರೆ.

ಬಯೋ ಮೆಡಿಕಲ್ ಇಂಜಿನಿಯರಿಂಗ್ ಓದುತ್ತಿರುವ ಅಮೃತಾ ಪ್ರೇಮ್, ಓದಿನ ಜೊತೆ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಳ್ಳಲಿದ್ದಾರೆ. ಟಗರು ಪಲ್ಯ ಸಿನಿಮಾ ಹಲವು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು, ಉಮೇಶ್.ಕೆ.ಕೃಪ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇಕ್ಕಟ್ ಖ್ಯಾತಿಯ ನಾಗಭೂಷಣ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಸ್ಕ್ರಿಪ್ಟ್ ಕೆಲಸ ಮುಗಿಸಿರುವ ಟಗರು ಪಲ್ಯ ಟೀಂ, ಡಿಸೆಂಬರ್ ಮೊದಲ ವಾರದಲ್ಲಿ ಅಧಿಕೃತ ಸೆಟ್ಟೇರಲಿದೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್. ಕೆ. ರಾವ್ ಕ್ಯಾಮೆರಾ ವರ್ಕ್, ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ.

ನಟ ಪ್ರೇಮ್ ಚಿತ್ರರಂಗದ ಅಜಾತಶತ್ರು. ಎಲ್ಲರೊಟ್ಟಿಗೂ ಉತ್ತಮ ಒಡನಾಟ ಹಾಗೂ ಬಾಂಧವ್ಯ ಹೊಂದಿರೋ ಸಹೃದಯಿ. ಇತ್ತೀಚೆಗೆ ಶರಣ್ ನಟನೆಯ ಗುರು ಶಿಷ್ಯರು ಚಿತ್ರದಲ್ಲಿ ಮಗ ಏಕಾಂತ್​ನನ್ನ ಲಾಂಚ್ ಮಾಡಿದ್ರು. ಮಗನ ಟೆರಿಫಿಕ್ ಪರ್ಫಾಮೆನ್ಸ್​ಗೆ ಎಲ್ಲೆಡೆಯಿಂದ ಪ್ರಶಂಸೆ ಕೂಡ ವ್ಯಕ್ತವಾಯ್ತು. ಇದೀಗ ಮಗ ಇಂಡಸ್ಟ್ರಿಗೆ ಕಾಲಿಟ್ಟ ಬೆನ್ನಲ್ಲೇ ಮಗಳನ್ನೂ ಇಂಟ್ರಡ್ಯೂಸ್ ಮಾಡ್ತಿದ್ದಾರೆ. ನಟನೆ ಇವ್ರಿಗೆ ರಕ್ತಗತವಾಗಿಯೇ ಬಂದಿರೋದ್ರಿಂದ ಕನ್ನಡ ಕಲಾಭಿಮಾನಿಗಳು ತುಂಬು ಹೃದಯದಿಂದ ಸ್ವೀಕರಿಸ್ತಾರೆ ಅನ್ನೋದು ಪ್ರೇಮ್ ಕುಟುಂಬದ ನಿರೀಕ್ಷೆ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES