ಮಹಾರಾಷ್ಟ್ರ : ಪುಣೆಗೆ ಹೋಗುವ ರೈಲನ್ನು ಹತ್ತಲು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮೇಲ್ಸೇತುವೆಯ ಮೇಲೆ ಸಂಚರಿಸುವಾಗ ಅದರ ಒಂದು ಭಾಗವು ಹಠಾತ್ತನೆ ಕೆಳಗೆ ಕುಸಿದು ಅನಾಹುತ ಸಂಭವಿಸಿದೆ.
ಮಹಾರಾಷ್ಟ್ರದ ಚಂದ್ರಾಪುರದ ಬಲ್ಹರ್ಷಾ ರೈಲ್ವೆ ಜಂಕ್ಷನ್‌ನಲ್ಲಿ ಭಾನುವಾರ ಮೇಲ್ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ 48 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಅವಘಡದಿಂದ 12 ಜನರು ಗಾಯಗೊಂಡಿದ್ದಾರೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಸ್ಕೈವಾಕ್ ಕೆಳಗೆ ನಡೆದುಕೊಂಡು ಹೋಗುತ್ತಿದ್ದ ಪ್ರಯಾಣಿಕರ ಮೇಲೆ ಸ್ಲ್ಯಾಬ್ ಕುಸಿದು ಬಿದ್ದಿದೆ. ಇದರಿಂದ ಕೆಲವು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.
ಪ್ಲಾಟ್‌ಫಾರ್ಮ್ ಸಂಖ್ಯೆ 1ರಿಂದ 5ರವರೆಗೆ ಸಂಪರ್ಕಿಸುವ ಏಕೈಕ ಮೇಲ್ಸೇತುವೆ ಇದಾಗಿದೆ. ಪುಣೆಗೆ ಹೋಗುವ ರೈಲನ್ನು ಹಿಡಿಯಲು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮೇಲ್ಸೇತುವೆಯ ಮೇಲೆ ಸಂಚರಿಸುತ್ತಿದ್ದರು. ಆಗ ಅದರ ಒಂದು ಭಾಗವು ಕೆಳಗೆ ಕುಸಿದಿದ್ದು, ಇದರಿಂದಾಗಿ 13 ಜನರು ಸುಮಾರು 20 ಅಡಿ ಕೆಳಗಿದ್ದ ರೈಲ್ವೆ ಹಳಿಯ ಮೇಲೆ ಬಿದ್ದಿದ್ದಾರೆ. ಈ ವೇಳೆ ಓರ್ವ ಮಹಿಳೆ ಮೃತಪಟ್ಟಿದ್ದು, ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಗಾಯಾಳುಗಳನ್ನು ಬಲ್ಲಾರ್‌ಪುರ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಿದ್ದು, ಅವರಲ್ಲಿ ಕೆಲವರನ್ನು ಚಂದ್ರಾಪುರ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಜಿಲ್ಲಾ ಮಾಹಿತಿ ಕಚೇರಿ ತಿಳಿಸಿದೆ.