ಗುಜರಾತ್ : ದಿನ ದಿನಕ್ಕೂ ಗುಜರಾತ್ ವಿಧಾನಸಭಾ ಕಣ ರಂಗೇರುತ್ತಿದೆ. ಆಡಳಿತಾರೂಢ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ 40 ಭರವಸೆಗಳನ್ನು ಈಡೇರಿಸುವುದಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಗುಜರಾತ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವುದು ಮತ್ತು ಸಮಾಜ ವಿರೋಧಿ ನಿಗ್ರಹ ದಳ ಸ್ಥಾಪನೆ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಿಜೆಪಿ ‘ಸಂಕಲ್ಪ ಪತ್ರ’ ಎಂಬ ಹೆಸರಿನ ಪ್ರಣಾಳಿಕೆಯನ್ನು ಗಾಂಧಿನಗರದಲ್ಲಿರುವ “ಶ್ರೀ ಕಮಲಂ” ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಮತ್ತು ಗುಜರಾತ್ ರಾಜ್ಯ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಉಪಸ್ಥಿತರಿದ್ದರು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮೊದಲ ಬಾರಿಗೆ ಸಮಾಜ ವಿರೋಧಿ ನಿಗ್ರಹ ದಳ ಸ್ಥಾಪಿಸುವುದಾಗಿ ಭರವಸೆ ನೀಡಿದೆ. ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಜೆಪಿ ನಡ್ಡಾ, ಸಂಭಾವ್ಯ ಬೆದರಿಕೆಗಳು ಮತ್ತು ಭಯೋತ್ಪಾದಕ ಸಂಘಟನೆಗಳನ್ನು, ಭಾರತ ವಿರೋಧಿ ಶಕ್ತಿಗಳ ಸ್ಲೀಪರ್ ಸೆಲ್‌ಗಳನ್ನು ಗುರುತಿಸಲು ಮತ್ತು ತೊಡೆದುಹಾಕಲು ನಾವು ಆಂಟಿ-ರ್ಯಾಡಿಕಲೈಸೇಶನ್ ಸೆಲ್ ಅನ್ನು ರಚಿಸುತ್ತೇವೆ ಎಂದು ಹೇಳಿದರು.
ಹೋರಾಟದ ಹೆಸರಿನಲ್ಲಿ ಸಮಾಜ ವಿರೋಧಿಗಳು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿ ಮಾಡಿದರೆ ಗಲಭೆಕೋರರಿಂದಲೇ ದಂಡ ವಸೂಲಿ ಮಾಡಲು ಗುಜರಾತ್ ವಸೂಲಾತಿ ಕಾಯ್ದೆಯನ್ನು ಜಾರಿಗೆ ತರುತ್ತೇವೆ. ಈ ಮೂಲಕ ಗಲಭೆಗಳು, ಹಿಂಸಾತ್ಮಕ ಪ್ರತಿಭಟನೆಗಳು, ಅಶಾಂತಿಯನ್ನು ತಡೆಯಲಾಗುವುದು ಎಂದು ನಡ್ಡಾ ತಿಳಿಸಿದರು. ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ. ಗುಜರಾತ್ ಏಕರೂಪ ನಾಗರಿಕ ಸಂಹಿತೆ ಸಮಿತಿಯ ಶಿಫಾರಸನ್ನು ಸಂಪೂರ್ಣ ಅನುಷ್ಠಾನಗೊಳಿಸುತ್ತೇವೆ ಎಂದು ಹೇಳಿದರು.