Monday, December 23, 2024

ಕೆಎಂಎಫ್‌ನ ಎಲ್ಲಾ ಉತ್ಪನ್ನಗಳ ದರ ಏರಿಕೆ..!

ಬೆಂಗಳೂರು : ಸರ್ಕಾರ ಚಾಪೆ‌ ಕೆಳಗೆ ದೂರಿದ್ರೆ ಕೆಎಂಎಫ್ ರಂಗೋಲಿ ಕೆಳಗೆ ದೂರುತ್ತಿದೆ. ಬುಧವಾರ ಹಾಲು, ಮೊಸರಿನ ದರವನ್ನು ಲೀಟರ್‌ಗೆ ಎರಡು ರೂಪಾಯಿಯಂತೆ ಹೆಚ್ಚಳ ಮಾಡಿ ಕೆಎಂಎಫ್ ಅಧಿಕೃತ ಘೋಷಣೆ ಮಾಡಿತು‌. ಆದ್ರೆ, ಅಧಿಕೃತ ಘೊಷಣೆ ಮಾಡದೇ ಕೆಎಂಎಫ್‌ನ ಎಲ್ಲಾ ಉತ್ಪನ್ನಗಳ ದರ ಹೆಚ್ಚಳವನ್ನು ಸೈಲೆಂಟಾಗಿ ಮಾಡುತ್ತಿದೆ. ದಸರಾ ಹಬ್ಬದಿಂದಲೇ ತುಪ್ಪದ ದರ ಹೆಚ್ಚುತ್ತಲೇ ಇದೆ. ಒಮ್ಮೆಗೆ ದರ ಏರಿಸದೇ ಕಳೆದ ಎರಡು ತಿಂಗಳುಗಳಲ್ಲಿ ನಾಲ್ಕು ಬಾರಿ ಹಂತ ಹಂತವಾಗಿ ಒಟ್ಟು 170 ರೂಪಾಯಿವರೆಗೆ ಹೆಚ್ಚಳ ಮಾಡಿತ್ತು. ಕೇವಲ ತುಪ್ಪ ಮಾತ್ರವಲ್ಲ ಇದೀಗ ಕೆಎಂಎಫ್‌ನ ಎಲ್ಲಾ ಉತ್ಪನ್ನಗಳ ದರವನ್ನ ಶೇ.5-15 % ರಷ್ಟು ಹೆಚ್ಚಳ ಮಾಡಿದೆ.

ಉತ್ಪನ್ನ – ಮೊದಲಿನ ದರ ತೂಕ – ಈಗಿನ ದರ
ಪೇಡ 220 ರೂ. 1/4 ಕೆಜಿ – 240 ರೂ.
ಬಾದಾಮ್ ಪೌಡರ್ 400 ರೂ. 1 ಕೆಜಿ – 440 ರೂ.
ರಸ್ಕ್ 15 ರೂ. 100 ಗ್ರಾಂ – 20 ರೂ.
ಜಾಮೂನು 130 ರೂ. 1/2 ಕೆಜಿ – 150 ರೂ.
ರಸಗುಲ್ಲಾ 130 ರೂ. 1/4 ಕೆಜಿ – 160 ರೂ.
ಬರ್ಫಿ 195 ರೂ. 1/4 ಕೆಜಿ – 230 ರೂ.
ಮೈಸೂರು ಪಾಕ್ 135 ರೂ. 1/4 ಕೆಜಿ – 160 ರೂ.
ಕೋವಾ 60 ರೂ. 200 ಕೆಜಿ – 90 ರೂ.

ಇನ್ನು, ಈ ಮೊದಲು ಹಾಲು, ಮೊಸರು ದರ ಹೆಚ್ಚಳಕ್ಕೆ ಕೆಎಂಎಫ್ ಹಲವು ಬಾರಿ ಸರ್ಕಾರಕ್ಕೆ ಪ್ರಸ್ತಾಪ ಮಾಡಿತ್ತು. ಆದರೆ, ಚುನಾವಣೆ ವರ್ಷ ದರ ಏರಿಕೆಗೆ ಸಿಎಂ ಒಪ್ಪಿರಲಿಲ್ಲ. ಇದರಿಂದಾಗಿ ಘೋಷಣೆ ಮಾಡದೆ ತುಪ್ಪದ ದರ 170 ರೂ. ಸೈಲೆಂಟಾಗಿ ಹೆಚ್ಚಳ ಮಾಡಿತ್ತು. ಅದೇ ರೀತಿ ಕೆಎಂಎಫ್ ನ ಇನ್ನಿತರೆ ಉತ್ಪನ್ನಗಳ ದರವೂ ಹೆಚ್ಚಳ ಮಾಡಿದೆ. ಇದ್ರಿಂದ ಹೋಟೆಲ್ ಮಾಲೀಕರ ಸಂಘವೂ ಕೂಡಾ ತಿಂಡಿ ತಿನಿಸುಗಳನ್ನು ಹೆಚ್ಚಳ ಮಾಡಲು ನಿರ್ದರಿಸಿದೆ. ಆದ್ರೂ ಕೂಡಾ ಗ್ರಾಹಕರಿಗೆ ಹೊರೆಯಾಗುವಂತಹ ಕೆಲಸ ನಾವು ಮಾಡೋದಿಲ್ಲ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸ್ತೇವೆ ಅಂತಿದೆ ಸಂಘ.‌

ಒಟ್ನಲ್ಲಿ ದುಬಾರಿ ದುನಿಯಾದಲ್ಲಿ ಹಾಲು, ಮೊಸರು ದರದ ಜೊತೆ ಕೆಎಂಫ್‌ನ ಎಲ್ಲಾ ಪ್ರಾಡಕ್ಟ್‌ಗಳ ದರವನ್ನೂ ಹೆಚ್ಚಳ ಮಾಡಿದೆ. ಸದ್ಯಕ್ಕೆ ಹೋಟೆಲ್‌ಗಳ ಟೀ-ಕಾಫಿ, ತಿಂಡಿ ದರ ಹೆಚ್ಚಳ ಮಾಡುತ್ತಿಲ್ಲ ಎನ್ನುವುದು ಸದ್ಯದ ಸಮಾಧಾನದ ಸಂಗತಿ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES