Sunday, January 19, 2025

ಭಟ್ರ ಡ್ರಾಮಾಗೆ ದಶಕ.. ರಾಕಿಂಗ್ ಜೋಡಿಗೆ ಮೇಜರ್ ಟ್ವಿಸ್ಟ್

ರಾಕಿಭಾಯ್ ಯಶ್ ಹಾಗೂ ಅಭಿನಯ ಚತುರ ನೀನಾಸಂ ಸತೀಶ್ ಜೋಡಿಯ ಡ್ರಾಮಾ ಚಿತ್ರ ತೆರೆಕಂಡು ದಶಕ ಕಳೆದಿದೆ. ಈ ಹತ್ತು ವರ್ಷದಲ್ಲಿ ಆ ಸಿನಿಮಾಗೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಆ ಸಿನಿಮಾ ಸಾಕಷ್ಟು ಮಂದಿಗೆ ನಿರೀಕ್ಷೆಗೂ ಮೀರಿದ ಸಕ್ಸಸ್ ಕೊಟ್ಟಿದೆ. ಅದ್ರಲ್ಲೂ ರಾಕಿಂಗ್ ಲವ್​ಗೆ ಬುನಾದಿಯೇ ಈ ಡ್ರಾಮಾ.

  • ಯಶ್- ರಾಧಿಕಾ ಲವ್ ಟ್ರ್ಯಾಕ್​ಗೆ ಶೂಟಿಂಗ್ ಅಡ್ಡಾ ಸಾಕ್ಷಿ..!
  • 4 ಕೋಟಿ ಬಂಡವಾಳ.. 15 ಕೋಟಿ ಗಳಿಸಿದ ಎಂಟರ್​ಟೈನರ್
  • ಚೆಂದುಟಿಯ ಪಕ್ಕ ಬೊಟ್ಟಿಟ್ಟ ರಾಕಿಂಗ್ ಸ್ಟಾರ್​ಗೆ ಬಹುಪರಾಕ್

ಮೊಗ್ಗಿನ ಮನಸು ಚಿತ್ರದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಯ್ತು. ಅದಕ್ಕೆ ಅಂತಲೇ ಮತ್ತೊಮ್ಮೆ ಈ ಜೋಡಿಯನ್ನ ಒಟ್ಟುಗೂಡಿಸಿ ಸಿನಿಮಾ ಮಾಡೋಕ್ಕೆ ಮುಂದಾಗಿದ್ದು, ಸ್ಯಾಂಡಲ್​ವುಡ್​ನ ಮಾಡ್ರನ್ ಮೇಷ್ಟ್ರು ಯೋಗರಾಜ್ ಭಟ್. ಯೆಸ್.. ಮೊಗ್ಗಿನ ಮನಸು ಚಿತ್ರವಾದ ನಾಲ್ಕು ವರ್ಷಗಳ ನಂತ್ರ ಮತ್ತೆ ಯಶ್-ರಾಧಿಕಾ ಡ್ರಾಮಾ ಮೂಲಕ ಜೊತೆಯಾದ್ರು.

ಡ್ರಾಮಾ ಚಿತ್ರ ಬರೋ ವೇಳೆಗೆ ಯಶ್ ಮತ್ತು ರಾಧಿಕಾ ಇಬ್ಬರೂ ಸಹ ಕನ್ನಡ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರಗಳನ್ನ ನೀಡುತ್ತಾ, ಬಹುಬೇಡಿಕೆಯ ಸ್ಟಾರ್​ಗಳಾಗಿ ಬೆಳೆದಿದ್ರು. ಅಪಾರ ಅಭಿಮಾನಿ ಬಳಗದ ಜೊತೆಗೆ ತಮ್ಮದೇ ನೇಮು-ಫೇಮು ಕೂಡ ಪಡ್ಕೊಂಡಿತ್ತು ಈ ಜೋಡಿ.

ಇಬ್ಬರೂ ಗೆಲ್ಲೋ ಕುದುರೆಗಳಂತೆ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿರೋದು ನೋಡಿಯೇ ಈ ಜೋಡಿಯನ್ನ ಮತ್ತೆ ಬೆಳ್ಳಿತೆರೆಗೆ ತರುವಲ್ಲಿ ಭಟ್ಟರು ಯಶಸ್ವಿಯಾಗ್ತಾರೆ. ಅದರಂತೆ ರೊಮ್ಯಾಂಟಿಕ್ ಕಾಮಿಡಿ ಥ್ರಿಲ್ಲರ್ ಡ್ರಾಮಾ ಮಾಡಿ ದೊಡ್ಡ ಮಟ್ಟದ ಸಕ್ಸಸ್ ಕೂಡ ಪಡೀತಾರೆ. ಯಶ್-ರಾಧಿಕಾ ಪಂಡಿತ್ ಜೋಡಿಗೆ ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಡ್ರಾಮಾದಲ್ಲಿ ಸಾಥ್ ಕೊಡ್ತಾರೆ.

ವಿಶೇಷ ಅಂದ್ರೆ ಇಲ್ಲಿಯೂ ಮೊಗ್ಗಿನ ಮನಸಿನ ರೀತಿಯ ಕಾಲೇಜು ಕಥಾಹಂದರವಿದೆ. ಆದ್ರೆ ಅದನ್ನ ನಿರೂಪಿಸಿರೋ ವಿಧಾನ ತುಂಬಾ ಸೊಗಸಾಗಿದೆ. ಗೊಂಬೆ ಆಡಿಸೋನ ಮಾತಿನಂತೆ ಪಶ್ಚಿಮ ದಿಕ್ಕಿಗೆ ತೆರಳೋ ಯಶ್, ನೂರೆಂಟು ಸಮಸ್ಯೆಗಳಲ್ಲಿ ಸಿಲುಕಿಕೊಳ್ತಾನೆ. ಆ ಸಮಸ್ಯೆಗಳ ಜೊತೆಗೆ ರಾಧಿಕಾ ಜೊತೆಗಿನ ನವಿರಾದ ಪ್ರೇಮಕಥೆ ಕೂಡ ಸಾಗುತ್ತೆ. ಅದಕ್ಕೇ ಅಂತಲೇ ಈ ಚಿತ್ರಕ್ಕೆ ಡ್ರಾಮಾ ಅಂತ ಟೈಟಲ್ ಇಟ್ರು ಭಟ್ರು.

ಚೆಂದುಟಿಯ ಪಕ್ಕದಲಿ ತುಂಬಾ ಹತ್ತಿರ ನಿಂತು ಬೊಟ್ಟಿಡುವಲ್ಲಿ ಯಶ್ ಭೇಷ್ ಅನಿಸಿಕೊಳ್ತಾರೆ. ಬರೀ ಸಿನಿಮಾದಲ್ಲಷ್ಟೇ ಅಲ್ಲ, ಹಾಡುಗಳಲ್ಲೂ ಈ ಜೋಡಿ ತುಂಬಾ ರೊಮ್ಯಾಂಟಿಕ್ ಅಂಡ್ ಲೈವ್ಲಿ ಆಗಿ ಕಾಣಿಸಿಕೊಂಡು ಮತ್ತೊಮ್ಮೆ ಮೋಡಿ ಮಾಡುವಲ್ಲಿ ಸೈ ಅನಿಸಿಕೊಳ್ಳುತ್ತೆ. ಬಾಕ್ಸ್ ಆಫೀಸ್​ನಲ್ಲೂ 15 ಕೋಟಿ ಭಾರೀ ಕಲೆಕ್ಷನ್ ಮೂಲಕ ದೊಡ್ಡ ದಾಖಲೆ ಬರೆಯೋ ಈ ಚಿತ್ರ, ಯಶಸ್ವಿ ಜೋಡಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗುತ್ತೆ.

ಇಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಕಿರುತೆರೆಯಿಂದ ಸ್ನೇಹಿತರಾಗಿದ್ರೂ, ಮೊಗ್ಗಿನ ಮನಸ್ಸು ಅನ್ನೋ ಸಿನಿಮಾ ಮಾಡಿದ್ರೂ ಸಹ ಅವ್ರ ಸ್ನೇಹ, ಪ್ರೀತಿಯ ರೂಪ ಪಡೆಯೋಕೆ ಇದೇ ಶೂಟಿಂಗ್ ದಿನಗಳು ಸಾಕ್ಷಿ ಆಗುತ್ವೆ. ಹೌದು.. ಇವರ ಮಧ್ಯೆ ಪರಸ್ಪರ ಪ್ರೇಮಾಂಕುರಿಸಿ, ಅದನ್ನ ಇದೇ ಶೂಟಿಂಗ್ ಸೆಟ್​ನಲ್ಲಿ ಬೀಚ್ ಬಳಿ ಪ್ರಪೋಸ್ ಮಾಡಿಕೊಳ್ತಾರೆ. ನಂತ್ರ ಎಂಗೇಜ್​ಮೆಂಟ್, ಮದ್ವೆ ಆಗಿದ್ದು ಗೊತ್ತೇಯಿದೆ.

ಒಂದ್ಕಡೆ ಯಶ್- ರಾಧಿಕಾ ಕರಿಯರ್​ಗೆ ಡ್ರಾಮಾ ಮೇಜರ್ ಟ್ವಿಸ್ಟ್ ಕೊಟ್ರೆ, ಮತ್ತೊಂದ್ಕಡೆ ನೀನಾಸಂ ಸತೀಶ್​ ಸಿನಿಯಾನಕ್ಕೂ ಮಹತ್ವದ ಸಿನಿಮಾ ಆಗುತ್ತೆ. ಅಭಿನಯ ಚತುರನಾಗಿ ಸತೀಶ್ ಮಿಂಚೋಕೆ ಈ ಸಿನಿಮಾ ಕಾರಣವಾಗುತ್ತೆ. ಸಿಂಧು ಲೋಕನಾಥ್- ಸತೀಶ್ ಜೋಡಿ ಕೂಡ ಚಿತ್ರದ ಗಮ್ಮತ್ತು ಹೆಚ್ಚಿಸಿದ್ರು. ಇಂತಹ ಸಿನಿಮಾ ತೆರೆಕಂಡು ಬರೋಬ್ಬರಿ ಹತ್ತು ವರ್ಷ ಕಳೆದಿದೆ.

ಇಂದಿಗೂ ಡ್ರಾಮಾ ಸಾಂಗ್ಸ್ ಎವರ್​ಗ್ರೀನ್. ವಿ ಹರಿಕೃಷ್ಣ ಕಂಪೋಸ್ ಮಾಡಿದ ಆಲ್ಬಮ್​ನ ಒಂದೊಂದು ಹಾಡು ಕೂಡ ಮತ್ತೆ ಮತ್ತೆ ಕೇಳಬೇಕೆನಿಸುತ್ತೆ. ಕಬ್ಬಿನ ಗದ್ದೆ, ಪ್ರಿನ್ಸಿಪಾಲ್ ಕೇಶ ಮುಂಡನೆ, ಬುಲೆಟ್​ ಸ್ಟ್ಯಾಂಡ್ ಹಾಕೋದು ಸೇರಿದತೆ ಚಿತ್ರದಲ್ಲಿ ಸಾಕಷ್ಟು ವಿಷಯಗಳು ನೋಡುಗರನ್ನ ಕಾಡಲಿವೆ. ಹತ್ತು ವರ್ಷಗಳಾದ್ರೂ ಇಂದಿಗೂ ಈ ಸಿನಿಮಾ ನೋಡುಗರಿಗೆ ಫೇವರಿಟ್ ಅನಿಸ್ತಿದೆ ಅಂದ್ರೆ ಭಟ್ರ ಬರವಣಿಗೆಯ ಗತ್ತು, ರಾಕಿಂಗ್ ಜೋಡಿಯ ತಾಕತ್ತು ಎಂಥದ್ದು ಅನ್ನೋದನ್ನ ನೀವೇ ಊಹಿಸಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES