Monday, December 23, 2024

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ : ಮಾತುಕತೆಗೆ ಏಕನಾಥ ಶಿಂಧೆ ಇಂಗಿತ

ಬೆಳಗಾವಿ : ಕರ್ನಾಟಕ ಮಹಾರಾಷ್ಟ್ರ ಗಡಿ‌ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೊಸ ವರಸೆ ಶುರುಮಾಡಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ತಾನೇ ಸುಪ್ರೀಂಕೋರ್ಟ್‌ನಲ್ಲಿ ಧಾವೆ ಹೂಡಿ ಈಗ ಮಾತುಕತೆ ಮೂಲಕ ಬಗೆಹರಿಯಬೇಕು ಎಂದು ಹೊಸವಾದ ಶುರು ಮಾಡಿದೆ. ಗಡಿ ವಿವಾದ ಮಾತುಕತೆ ಮೂಲಕ ಬಗೆಹರಿಯಬೇಕೆಂಬುದು ನಮ್ಮ ನಿಲುವು ಅಂತ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿಕೆ ನೀಡಿದ್ದು ಮತ್ತೆ ಎಲ್ಲರ ಗಮನ ಸೆಳೆದಿದೆ.

ಗಡಿವಿವಾದ ಕುರಿತು ನಾವು ಈಗಾಗಲೇ ಸಭೆ ನಡೆಸಿದ್ದೇವೆ. ಈ ಹಳೆಯ ವಾದವೇನಿದೆ ಅದು ನ್ಯಾಯಾಲಯದ ಮುಂದಿದೆ. ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಆದ್ರೆ ಇದರ ಜೊತೆಗೆ ಈ ವಿಷಯ ಮಾತುಕತೆ ಮೂಲಕ ಬಗೆಹರಿಯಬೇಕು. ಇದು ಮಹಾರಾಷ್ಟ್ರ ಸರ್ಕಾರದ ನಿಲುವಾಗಿದೆ. ಎರಡೂ ರಾಜ್ಯಗಳ ರಾಜ್ಯಪಾಲರ ಸಭೆಯಾಗಿದೆ. ಕೇಂದ್ರ ಸರ್ಕಾರ ಸಹ ಸಕಾರಾತ್ಮಕ ನಿಲುವು ವ್ಯಕ್ತಪಡಿಸಬೇಕಿದೆ. ಈ ವಿವಾದ ಸರ್ವ ಸಮ್ಮತಿ ಮೂಲಕ ಬಗೆ ಹರಿಯಬೇಕೆಂಬುದು ನಮ್ಮ ನಿಲುವು. ಈ ನಿಟ್ಟಿನಲ್ಲಿ ನಾವು ಸಭೆಯನ್ನು ಸಹ ಮಾಡಿದ್ದೇವೆ ಅಂತಾ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇತ್ತ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರ ಮತ್ತೆ ಕೆದಕಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಗ್ರಾಮವನ್ನು ವಶಕ್ಕೆ ಪಡೆಯುತ್ತೇವೆ. ಮಹಾರಾಷ್ಟ್ರಕ್ಕೆ ಸೇರಬೇಕಾದ ಒಂದೇ ಒಂದು ಗ್ರಾಮವನ್ನು ಕರ್ನಾಟಕಕ್ಕೆ ಬಿಟ್ಟು ಕೊಡಲ್ಲ. ಮರಾಠಿ ಭಾಷೆ ಬಹು ಸಂಖ್ಯಾ ಇರುವ ಬೆಳಗಾವಿ, ನಿಪ್ಪಾಣಿ ಕಾರವಾರ ಗಡಿ ಗ್ರಾಮಗಳನ್ನು ‌ಮಹಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇವೆ. ಕರ್ನಾಟಕದ ಮರಾಠಿ ಭಾಷಿಕ ಪ್ರದೇಶ ನಮ್ಮದು. ಅದಕ್ಕಾಗಿ ಹೋರಾಟ ನಿಲ್ಲದು ಎಂಬ ಹೇಳಿಕೆ ಕರ್ನಾಟಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.

ಇತ್ತ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಹೇಳಿಕೆಗೆ ಕರ್ನಾಟಕದ ಸಿಎಂ ಕೂಡ ಖಡಕ್ಕಾಗಿ ಮೂಲಕ ತಿರುಗೇಟು ನೀಡಿದ್ದಾರೆ. ದೇವೇಂದ್ರ ಫಡ್ನವಿಸ್ ಹೇಳಿಕೆ ಪ್ರಚೋದನಾಕಾರಿಯಾಗಿದೆ. ನಮ್ಮ ಕರ್ನಾಟಕದ ಜಾಗವನ್ನು ಒಂದಿಂಚು ಮಹಾರಾಷ್ಟ್ರಕ್ಕೆ ಬಿಟ್ಟಕೊಡಲ್ಲ. ಕನ್ನಡದ ನೆಲ ಜಲ ರಕ್ಷಣೆಯಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ಮಹಾರಾಷ್ಟ್ರದ ಕನ್ನಡ ಭಾಗಗಳು ನಮ್ಮದು. 2004 ರಿಂದಲೂ ಮಹಾರಾಷ್ಟ್ರ ಗಡಿ ಕ್ಯಾತೆ ತೆಗೆಯುತ್ತಿದೆ. ಅದು ಯಶಸ್ಸು ಆಗಿಲ್ಲ, ಮುಂದೆ ಆಗೋದು ಇಲ್ಲ ಅಂತ ‌ಮಹಾರಾಷ್ಟ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಒಟ್ಟಿನಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರ 18 ವರ್ಷಗಳ ಬಳಿಕ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿದ್ದು ಮತ್ತೆ ಉಭಯ ರಾಜ್ಯಗಳ ನಡುವೆ ಕಾನೂನು ಹೋರಾಟ ಜೋರಾಗಿದೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನತ್ತ ಎಲ್ಲರ ಚಿತ್ತ ‌ನೆಟ್ಟಿದ್ದು, ತೀರ್ಪು ಯಾವರೀತಿ ಬರುತ್ತದೆ ಕಾದುನೋಡಬೇಕು.

ಅಣ್ಣಪ್ಪ ಬಾರ್ಕಿ ಪವರ್ ಟಿವಿ ಬೆಳಗಾವಿ

RELATED ARTICLES

Related Articles

TRENDING ARTICLES