ಮಹರಾಷ್ಟ್ರ : ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಪದೇ ಪದೇ ಕ್ಯಾತೆ ತೆಗೆಯುತ್ತಲೇ ಬಂದಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಅದ್ರಲ್ಲೂ ಮಹಾರಾಷ್ಟ್ರದಲ್ಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ರೂ ಮತ್ತೆ ತಗಾದೆ ತೆಗೆಯುತ್ತಿರೋದು ರಾಜ್ಯ ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಕರ್ನಾಟಕದ ಮರಾಠಿಗರಿಗೆ ಜೀವ ವಿಮೆ ಘೋಷಣೆ, ಸ್ವಾತಂತ್ರ್ಯ ಯೋಧರಿಗೆ ಪಿಂಚಣಿ ಹೆಚ್ಚಳ ಮಾಡಿ ಮತ್ತೆ ತನ್ನ ವರಸೆ ಶುರುಮಾಡಿರೋ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಕಿಡಿ ಹಚ್ಚೊ ಕೆಲಸ ಮಾಡ್ತಿದ್ದಾರೆ ಅಂತ ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ.
ಮಹಾರಾಷ್ಟ್ರದಲ್ಲಿ ನೆಲೆಸಿರುವ ಕರ್ನಾಟಕ ಏಕೀಕರಣ ಹಾಗು ಸ್ವಾತಂತ್ರ್ಯ ಹೋರಾಟದಲ್ಲಿ ಕೆಲಸ ಮಾಡಿದ ಕನ್ನಡಿಗರಿಗೆ ಪಿಂಚಣಿ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಹೊಸ ವರಸೆ ಶುರುಮಾಡಿದೆ.
ರಾಜ್ಯ ರಾಜ್ಯಗಳ ನಡುವೆ ವ್ಯಾಜ್ಯ ಹಚ್ಚುವ ಕೆಲಸವನ್ನು ಮಹಾರಾಷ್ಟ್ರ ಸಿಎಂ ಮಾಡಬಾರದು. ಎರಡು ರಾಜ್ಯಗಳ ಸೌಹಾರ್ದತೆ ಇರಬೇಕು ನಾವು ಎಲ್ಲ ಭಾಷಿಕರನ್ನೂ ಒಂದೇ ರೀತಿಯಲ್ಲಿ ನೋಡ್ಕೊಳ್ತಿದ್ದೇವೆ. ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕನ್ನಡಿಗರು ಇದ್ದಾರೆ. ಅವರ ಹಿತರಕ್ಷಣೆಯನ್ನು ಮಾಡಬೇಕಾದ ಕರ್ತವ್ಯ ನಮ್ಮದು, ನಾವು ಆ ಕೆಲಸವನ್ನು ಮಾಡ್ತೇವೆ ಅಂತ ಎಚ್ಚರಿಕೆ ನೀಡಿದ್ರು ಸಿಎಂ ಬೊಮ್ಮಾಯಿ.
ಇನ್ನು, ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದದ ಕುರಿತು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯು ನಾಳೆ ವಿಚಾರಣೆಗೆ ಬರಲಿದೆ. ರಾಜ್ಯದ ಪರವಾಗಿ ಸಮರ್ಥವಾದ ವಾದ ಮಂಡಿಸಲು ರಾಜ್ಯ ಸರ್ಕಾರ ರೆಡಿಯಾಗಿದೆ. 1956ರ ರಾಜ್ಯ ಪುನರ್ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. 2004ರಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ಸತತ 18 ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪರ ಸಮರ್ಥವಾದ ವಾದ ಮಂಡಿಸಲು ಬೇಕಾದ ಪೂರ್ವ ಸಿದ್ಧತೆಗಳನ್ನೂ ಅಲ್ಲಿನ ಸರ್ಕಾರ ಮಾಡಿಕೊಂಡಿದೆ ಎನ್ನಲಾಗಿದೆ.
ಇಷ್ಟುದಿನ ಮಹಾರಾಷ್ಟ್ರ ಸರ್ಕಾರ ಒಂದಲ್ಲೊಂದು ತಗಾದೆ ತೆಗೆದುಕೊಂಡೆ ಸರ್ಕಾರಕ್ಕೆ ತಲೆನೋವಾಗ್ತಿತ್ತು. ಮತ್ತೆ ಅದೇ ಹಾದಿಯಲ್ಲಿ ವಿಶೇಷ ಅನುದಾನ ನೀಡಲು ಮುಂದಾಗಿ ಜತ್ ತಾಲ್ಲೂಕಿನ ವಿಚಾರದಲ್ಲೂ ಕ್ಯಾತೆ ಶುರುಮಾಡಿದೆ. ಇದಕ್ಕೆ ನಾಯಕರು ಯಾವ ರೀತಿ ತಿರುಗೇಟು ನೀಡ್ತಾರೆ. ಹೈಕಮಾಂಡ್ ನಾಯಕರಿಗೆ ಇದರ ಬಗ್ಗೆ ಮಾಹಿತಿ ನೀಡಿ, ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡಿಸ್ತಾರಾ ಸಿಎಂ ಬೊಮ್ಮಾಯಿ ಅಂತಾ ಕಾದು ನೋಡಬೇಕಿದೆ.
ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು