ಅಹಮದಾಬಾದ್: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರಿಗೆ ಕಾಂಗ್ರೆಸ್ ಅಗೌರವ ತೋರಿತ್ತು. ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಆ ಪಕ್ಷ ಪಟೇಲ್ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆನಂದ್ ಜಿಲ್ಲೆಯ ಖಂಭಾಟ್ ಎಂಬಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಭಾಷಣ ಮಾಡಿದ್ದಾರೆ. ಸರ್ದಾರ್ ಪಟೇಲ್ ಅವರ ಅಂತ್ಯಸಂಸ್ಕಾರವನ್ನು ಕೂಡ ಸರಿಯಾದ ರೀತಿಯಲ್ಲಿ ನಡೆಸಲಾಗಿರಲಿಲ್ಲ ಎಂದು ಅಮಿತ್ ಶಾ ದೂರಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಅವರಿಗಾಗಿ ಸ್ಮಾರಕವನ್ನೂ ನಿರ್ಮಿಸಿರಲಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ನನ್ನ ಬಾಲ್ಯದ ದಿನಗಳಿಂದಲೂ ಕೂಡ ಕಾಂಗ್ರೆಸ್ ಪಟೇಲ್ ಅವರ ಬಗ್ಗೆ ಮಾತನಾಡಿದ್ದು ಕೇಳಿಯೇ ಇಲ್ಲ ಎಂದು ಪ್ರತಿಪಾದಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಕೂಡ ಆ ಪಕ್ಷ ವಿರೋಧವನ್ನೇ ವ್ಯಕ್ತಪಡಿಸಿತ್ತು ಎಂದರು. ಭಾವಾನಗರ ಜಿಲ್ಲೆಯ ಮಹುವಾದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಿಸಿ ಪ್ರಧಾನಿ ಮೋದಿಯವರು ಅವರ ಗೌರವ ಹೆಚ್ಚಿಸಿದ್ದಾರೆ. ಕಾಂಗ್ರೆಸ್ ಯಾವತ್ತೂ ಅವರ ಪರ ಒಲವು ಹೊಂದಿರಲಿಲ್ಲ ಎಂದು ದೂರಿದ್ದಾರೆ.