ಮಂಗಳೂರು : ಈಗ ಒಂದು ದೊಡ್ಡ ಅನಾಹುತ ತಪ್ಪಿದೆ ಅನ್ನೋ ನೆಮ್ಮದಿ ಇದೆ. ಬಾಂಬ್ ಬ್ಲಾಸ್ಟ್ ಆಗಿದ್ದರೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗ್ತಾ ಇತ್ತು. ಆದರೆ ಆ ವಿಚಾರದಲ್ಲಿ ದೇವರಿಗೆ ಧನ್ಯವಾದ ಸಲ್ಲಿಸಲೇ ಬೇಕು ಎಂದು ಸುದ್ದಿಗೋಷ್ಠಿ ವೇಳೆ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ನವೆಂಬರ್ 19ರಂದು ಸಂಜೆ 4.40ರಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಪ್ರಯಾಣಿಕ, ಆಟೋ ಚಾಲಕನಿಗೆ ಗಾಯಗಳಾಗಿವೆ. ತಕ್ಷಣ ಪೊಲೀಸ್ ಅಧಿಕಾರಿಗಳಿಂದ ಗುರುತು ಪತ್ತೆ ಮಾಡುವ ಕೆಲಸ ನಡೆದಿದ್ದು ಆರೋಪಿ ಬಳಿ ಪ್ರೇಮರಾಜ್ ಎಂಬ ಹೆಸರಿನ ಐಡಿ ಸಿಕ್ಕಿತ್ತು. ನಾನೇ ಪ್ರೇಮರಾಜ್ ಎಂಬಾತನ ಜೊತೆ ಮಾತನಾಡಿದ್ದೇನೆ. ತಕ್ಷಣ ಪೊಲೀಸರಿಗೆ ತಿಳಿಸಲು ಪ್ರೇಮರಾಜ್ಗೆ ಹೇಳಿದ್ದೆ. ಶಾರಿಕ್ ಸಂಬಂಧಿಕರು ಬಂದು ಗುರುತು ಪತ್ತೆ ಹಚ್ಚಿದ್ದಾರೆ.
ಇನ್ನು, ಮೋಹನ್ ಕುಮಾರ್ ಎಂಬುವರ ಮನೆಯಲ್ಲಿ ವಾಸವಿದ್ದ. ಶಂಕಿತ ವಾಸವಿದ್ದ ಮನೆಯಲ್ಲಿ ಹಲವು ಸ್ಫೋಟಕ ವಸ್ತುಗಳು ಸಿಕ್ಕಿವೆ. ಈ ಆರೋಪಿಯು ಮೈಸೂರಿನಿಂದ ಮಂಗಳೂರಿಗೆ ಬಂದಿದ್ದಾನೆ. ಮತ್ತೊಂದು ಫೇಕ್ ಐಡಿ ಪಡೆದು ಕೊಯಮತ್ತೂರಲ್ಲೂ ವಾಸವಿದ್ದ ಎಂದು ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದರು.