ಬೆಂಗಳೂರು : ಅಟೋದಲ್ಲಿ ಕುಕ್ಕರ್ ಅನಿರೀಕ್ಷಿತವಾಗಿ ಸ್ಪೋಟಗೊಂಡಿದ್ದಲ್ಲ. ಇದೊಂದು ಭಯೋತ್ಪಾದನಾ ಕೃತ್ಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿದ ಅವರು, ಉದ್ದೇಶಪೂರ್ವಕವಾಗಿ ಸಾವು ನೋವು ಹಾನಿ ಉಂಟು ಮಾಡಲು ಮಾಡಿದ್ದ ಪ್ಲಾನ್ ಇದಾಗಿದ್ದು ಕೇಂದ್ರ ತನಿಖಾ ಸಂಸ್ಥೆಗಳ ಜೊತೆ ಕರ್ನಾಟಕ ಪೊಲೀಸ್ ಸೂಕ್ಷ್ಮವಾಗಿ, ಆಳವಾಗಿ ತನಿಖೆ ನಡೆಸುತ್ತಿದೆ ಎಂದಿದ್ದಾರೆ. ಆಟೋದಲ್ಲಿ ಕುಕ್ಕರ್ ಸ್ಫೋಟ ಪ್ರಕರಣ ತನಿಖೆಯ ಚುರುಕುಗೊಂಡಿದ್ದು ಪರಿಶೀಲನೆ ವೇಳೆ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿದೆ.
ನಟ್, ಬೋಲ್ಟ್, ಬ್ಯಾಟರಿ, ಸರ್ಕಿಟ್ ರೀತಿಯ ವೈರಿಂಗ್ ಇರುವ ವಸ್ತುಗಳು ಪತ್ತೆಯಾಗಿದೆ. ಲಘು ತೀವ್ರತೆ ಇರುವ ಸ್ಪೋಟಕ ಬಳಸಿರುವ ಶಂಕೆ ವ್ಯಕ್ತವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ, ಬಾಂಬ್ ನಿಷ್ಕ್ರೀಯ ದಳದಿಂದ ತೀವ್ರ ಪರಿಶೀಲನೆ ನಡೆಯುತ್ತಿದೆ. ಶನಿವಾರ ಸಂಜೆ 5 ಗಂಟೆಯ ವೇಳೆ ಮಂಗಳೂರಿನ ಪಂಪ್‍ವೆಲ್‍ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋ ನಿಗೂಢ ಸ್ಫೋಟಗೊಂಡಿದೆ. ದಾರಿ ಮಧ್ಯೆ ವ್ಯಕ್ತಿಯೊಬ್ಬ ಕೈಯಲ್ಲಿ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದು ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ. ಆದರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆಯ ಎದುರು ಕ್ಷಣಗಳಲ್ಲಿ ಆಟೋದ ಒಳಗೆ ಸ್ಫೋಟಗೊಂಡಿದ್ದು ಪ್ರಯಾಣಿಕನ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿತ್ತು.