ಬೆಂಗಳೂರು: ಚಿಲುಮೆ ಸಂಸ್ಥೆಯಿಂದ ಮತದಾರರ ಪಟ್ಟಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾಗೆ ರಾಜ್ಯ ಕಾಂಗ್ರೆಸ್ ದೂರು ನೀಡಿದೆ.
ಕಾಂಗ್ರೆಸ್ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕಮಾರ್ ನೇತೃತ್ವದ ನಿಯೋಗ ಇಂದು ರಾಜ್ಯ ಚುನಾವಣಾ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರ ಕೈಗೊಂಬೆಯಂತೆ ಚಿಲುಮೆ ಸಂಸ್ಥೆ ಮತದಾರರ ಪಟ್ಟಿಯನ್ನ ಅಕ್ರಮವಾಗಿ ಸರ್ವೇ ಮಾಡಲಾಗಿದೆ. ಚುನಾವಣೆ ವೇಳೆ ಈ ಅಕ್ರಮ ದುರುಪಯೋಗವಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಈ ವರೆಗೂ ಯಾರನ್ನೂ ಅರೆಸ್ಟ್ ಮಾಡಿಲ್ಲ. ನೆಪಕ್ಕೆ ಮಾತ್ರ ವಶಕ್ಕೆ ಪಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರೋ ಒಂದಿಬ್ಬರ ಮೇಲೆ ಕೇಸ್ ದಾಖಲು ಮಾಡಿದ್ರೆ ಆಗಲ್ಲ. ಎಲ್ಲರ ಮೇಲೆ ಎಫ್ಐಆರ್ ಹಾಕಬೇಕು. ಐಡಿ ಕಾರ್ಡ್ ಯಾರು ಪಡೆದಿದ್ದಾರೆ ಕೇಸ್ ಹಾಕಬೇಕು. ಎಲ್ಲರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು. ಚೀಫ್ ಜಸ್ಟೀಸ್ ಅವರು ಸುಮೊಟೋ ಅಡಿ ಕೇಸ್ ದಾಖಲಿಸಬೇಕು ಎಂದರು.
ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಈ ಮತದಾರರ ಪಟ್ಟಿಯ ಅಕ್ರಮ ತನಿಖೆ ಯಾಗಬೇಕು. ಅವರು ಏನು ತಪ್ಪು ಮಾಡಿದ್ದಾರೆ ಗೊತ್ತಾಗಬೇಕು. ಇದರಲ್ಲಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಯಾರೇ ಭಾಗಿಯಾಗಿದ್ರೂ ಅವರಿಗೆ ಶಿಕ್ಷೆಯಾಗಲಿ. ಯಾರು ಬಿಬಿಎಂಪಿ ಕಾರ್ಡ್ ನೀಡಿ ಮತದಾರರ ಸರ್ವೆ ಮಾಡಿಸಿದ್ದಾರೆ ಅವರ ಮೇಲೆ ಕೇಸ್ ಹಾಕಬೇಕು.
ಮತದಾರರ ವೈಯಕ್ತಿಕ ಮಾಹಿತಿ ಕಲೆಹಾಕುವುದು ಇದು ಕ್ರಿಮಿನಲ್ ಅಪರಾಧ. ಈ ಮೂಲಕ ರಾಜ್ಯ ಸರ್ಕಾರ ಮತದಾನದ ಹಕ್ಕುನ್ನ ಕಿತ್ತುಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಡಿಕೆಶಿ ದೂರಿದರು.