ನವದೆಹಲಿ : ಇಡೀ ದೇಶವೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಲ್ಕರ್ ಭೀಕರ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಕಳೆದ ತಿಂಗಳು ಬೆಳಗ್ಗೆ ಮನೆಯ ಹೊರಗೆ ಬ್ಯಾಗ್ ಸಮೇತ ತಿರುಗಾಡುತ್ತಿದ್ದ ದೃಶ್ಯಗಳು ಸೆರೆಯಾಗಿವೆ. ಸಿಸಿಟಿವಿ ದೃಶ್ಯಾವಳಿಯಿಂದ ಇದು ಬಹಿರಂಗವಾಗಿದೆ. ಈತ ಶ್ರದ್ಧಾ ವಾಕರ್ ಅವರ ದೇಹದ ಭಾಗಗಳನ್ನು ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಯತ್ನಿಸುತ್ತಿದ್ದಾರೆ. ಅಕ್ಟೋಬರ್ 18 ರಂದು ರೆಕಾರ್ಡ್ ಮಾಡಲಾದ ಈ ವಿಡಿಯೋ ಭೀಕರ ಕೊಲೆ ಪ್ರಕರಣದಲ್ಲಿ ದೊರೆತ ಮೊದಲ ಸಿಸಿಟಿವಿ ದೃಶ್ಯವಾಗಿದೆ. ಈ ವಿಡಿಯೋ ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿಯು ಕೈಯಲ್ಲಿ ಚೀಲ ಮತ್ತು ರಟ್ಟಿನ ಪೊಟ್ಟಣದೊಂದಿಗೆ ರಸ್ತೆಯಲ್ಲಿ ನಡೆಯುವುದನ್ನು ತೋರಿಸಲಾಗಿದೆ. ಆತನ ಮುಖ ಸ್ಪಷ್ಟವಾಗಿಲ್ಲ, ಆದರೆ ಆತನೇ ಅಫ್ತಾಬ್ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
ಈ ನಡುವೆ ಶ್ರದ್ಧಾ ಅವರ ಫೋನ್ ಬಗ್ಗೆ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ. ಅಫ್ತಾಬ್ ದೆಹಲಿ ಪೊಲೀಸರಿಗೆ ಶ್ರದ್ಧಾ ಅವರ ಫೋನ್ ಅನ್ನು ಮಹಾರಾಷ್ಟ್ರದಲ್ಲಿ ಎಲ್ಲೋ ಎಸೆದಿದ್ದೇನೆ ಎಂದು ಹೇಳಿದ್ದಾರೆ. ದೆಹಲಿ ಪೊಲೀಸರು ಸೆಲ್ ಫೋನ್ ಅನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಮೇ 26 ರವರೆಗೆ ಶ್ರದ್ಧಾ ಅವರ ಫೋನ್ ಆನ್ ಆಗಿತ್ತು, ಕೊನೆಯ ಸ್ಥಳ ಶ್ರದ್ಧಾ ಮತ್ತು ಅಫ್ತಾಬ್ ಅವರ ಮನೆಯಾಗಿತ್ತು. ಶ್ರದ್ಧಾ ಮತ್ತು ಅಫ್ತಾಬ್ ಮೇ ತಿಂಗಳಲ್ಲಿ ಮುಂಬೈನಿಂದ ದೆಹಲಿಗೆ ತೆರಳಿದ್ದರು. ಪೋಲಿಸರ ಪ್ರಕಾರ, ಪೂನಾವಾಲಾ ಮೇ 18 ರ ಸಂಜೆ ತನ್ನ ಸ್ನೇಹಿತೆ ಶ್ರದ್ಧಾ ವಾಕರ್ ಳನ್ನು ಕತ್ತು ಹಿಸುಕಿ ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ದಕ್ಷಿಣ ದೆಹಲಿಯ ಕಾಡಿನಲ್ಲಿ ಎಸೆದಿದ್ದಾನೆ.
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ ಇದೀಗ ಗುಜರಾತ್ ಚುನಾವಣೆಯ ವಸ್ತುವಾಗಿದೆ. ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿರುವ ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ ದೇಶಕ್ಕೆ ಬಲಿಷ್ಠ ನಾಯಕ ಇಲ್ಲದೇ ಹೋದರೆ ಅಫ್ತಾಬ್ನಂಥವರು ಪ್ರತೀ ನಗರದಲ್ಲಿ ಹುಟ್ಟುತ್ತಾರೆ ಎಂದು ಹೇಳಿದ್ದಾರೆ.
ಒಟ್ನಲ್ಲಿ, ಶ್ರದ್ಧಾ ಕೊಲೆ ಪ್ರಕರಣ ದೇಶಾದ್ಯಂತ ಕಿಚ್ಚು ಹೊತ್ತಿಸಿದ್ದು, ಹಂತಕನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಲಾಗ್ತಿದೆ. ಆದ್ರೆ, ಅಫ್ತಾಬ್ ತುಂಡು ಮಾಡಿ ಎಸೆದಿರುವ ಶ್ರದ್ಧಾ ದೇಹದ ಭಾಗಗಳ ತಲಾಶ್ ಮಾಡ್ತಿರುವ ಪೊಲೀಸರು ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.